ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವುದು ನಿಮಗೆಲ್ಲಾ ತಿಳಿದೇ ಇದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ 33ನೇ (ಗುರುವಾರ) ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಹಾಗೆಯೇ ಉಳಿಸಿವೆ. ಪೆಟ್ರೋಲ್ ದರಗಳು ಜುಲೈ 17 ರಂದು ಕೊನೆಯ ಬಾರಿಗೆ ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಾದ ಬಳಿಕ ಯಾವುದೇ ಬೆಲೆ ಪರಿಷ್ಕರಣೆಗೊಂಡಿಲ್ಲ.
ಕಳೆದ 33 ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿರುವುದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬ್ರೇಕ್ ಹಾಕಿದೆ. ಆದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 100 ರೂಪಾಯಿ ಗಡಿ ಹೋಗಿದ್ದು, ಕೇಂದ್ರ ಸರ್ಕಾರ ತೆರಿಗೆ ಇಳಿಸುವ ಗೋಜಿಗೆ ಹೋಗಿಲ್ಲ.
ಹೀಗೆ ದೇಶದಲ್ಲಿ ನೂರರ ಗಡಿ ದಾಟಿರುವ ಪೆಟ್ರೋಲ್ ದರದಿಂದಾಗಿ ವಾಹನ ಸವಾರರ ಜೇಬಿಗೆ ಹೆಚ್ಚಿನ ಹೊರೆಯಾಗತೊಡಗಿದೆ. ಪೆಟ್ರೋಲ್ ಅಷ್ಟೇ ಅಲ್ಲದೆ ಡೀಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್ ದರ ಏರಿಕೆಯು ಹಣದುಬ್ಬರ ಏರಿಕೆಯ ಜೊತೆಗೆ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆಟುಕದಂತಾಗಿದೆ.
ಈ ಮೊದಲು ದಿನನಿತ್ಯವೂ ತೈಲ ದರ ಏರಿಳಿಕೆಯು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ಕೆಲವು ವಾರಗಳಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಳಿತ ತಟಸ್ಥವಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ದರ ಗುರುವಾರ (ಆಗಸ್ಟ್ 19) ಪ್ರತಿ ಲೀಟರ್‌ಗೆ 105.25 ರೂಪಾಯಿನಷ್ಟಿದ್ದು, ಡೀಸೆಲ್ ದರ ಸತತ ಎರಡನೇ ದಿನ ಇಳಿಕೆಗೊಂಡು ಲೀಟರ್‌ಗೆ 94.86 ರೂಪಾಯಿ ತಲುಪಿದೆ.
ಹೀಗೆ ಬೆಲೆ ಎಷ್ಟೇ ಹೆಚ್ಚಾದರೂ ಈ ಸಂಪನ್ಮೂಲಗಳ ಮೇಲಿನ ಅವಲಂಭನೆಯು ಬೇಡಿಕೆಯನ್ನು ಸೃಷ್ಠಿಸಿದೆ. ದೇಶದ ನಾನಾ ನಗರಗಳಲ್ಲಿ ತೈಲ ದರ ಏರಿಳಿತ ಕಾಣುವಂತೆ ವಿಶ್ವದಲ್ಲಿ ಪ್ರತಿ ರಾಷ್ಟ್ರವೂ ವಿಭಿನ್ನ ತೈಲ ದರ ಹೊಂದಿದೆ. ಹಲವು ರಾಷ್ಟ್ರಗಳಲ್ಲಿ ತೈಲ ದುಬಾರಿಯಾದ್ರೆ, ಕೆಲವು ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಮ್ಮಿ ಇದೆ. ಅದ್ರಲ್ಲೂ ಕೆಲವೊಂದು ದೇಶಗಳಲ್ಲಂತೂ ತೈಲ ದರವು ಭಾರತದ ಬಿಸ್ಲೇರಿ ನೀರಿಗಿಂತಲೂ ಕಮ್ಮಿ ಇದ್ರೆ ಆಶ್ಚರ್ಯವಾಗುತ್ತೆ. ಈ ಕೆಳಗಿನ ಪೆಟ್ರೋಲ್, ಡೀಸೆಲ್ ದರವು 16 ಆಗಸ್ಟ್ 2021ರ ಅಂಕಿ-ಅಂಶವಾಗಿದೆ.
ವೆನಿಜುವೆಲಾ
ದಕ್ಷಿಣ ಅಮೆರಿಕಾದ ವೆನಿಜುವೆಲಾ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ದರವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ದರ 0.020 (16 ಆಗಸ್ಟ್, 2021) ಅಮೆರಿಕನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ ಕೇವಲ 1 ರೂಪಾಯಿ 49 ಪೈಸೆ ಆಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಅಗ್ಗದ ಪೆಟ್ರೋಲ್ ದರ ಹೊಂದಿರುವ ದೇಶ ಇದಾಗಿದೆ.
ಇರಾನ್
ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆಯ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಇಲ್ಲಿ ಪೆಟ್ರೋಲ್ ದರವು ಕುಡಿಯುವ ನೀರಿಗಿಂತ ಕಡಿಮೆಗೆ ದೊರಕುತ್ತದೆ. ಇದಕ್ಕೆ ಕಾರಣ ಪೆಟ್ರೋಲ್‌ಗೆ ಹೆಚ್ಚು ನೀಡಲಾಗುವ ಸಬ್ಸಿಡಿ. ಅಂದರೆ ನೈಜ ವೆಚ್ಚದ ಐದನೇ ಒಂದು ಭಾಗಕ್ಕೆ ಇಲ್ಲಿ ಪೆಟ್ರೋಲ್ ಮಾರಾಟವಾಗುತ್ತದೆ. ಶೇಕಡಾ 70 ಕ್ಕೂ ಹೆಚ್ಚಿನ ಸಬ್ಸಿಡಿಯನ್ನು ನೀಡಲಾಗುತ್ತದೆ. ಹೀಗಾಗಿ ಇರಾನ್ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ಮಾರಾಟ ಮಾಡುವ ರಾಷ್ಟ್ರವಾಗಿದ್ದು, ಇಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 0.060 ಅಮೆರಿಕನ್ ಡಾಲರ್ (4 ರುಪಾಯಿ 46 ಪೈಸೆ) ಆಗಿದೆ. ಇನ್ನು ಇರಾನ್‌ನಲ್ಲಿ ಡೀಸೆಲ್ ದರವು ಲೀಟರ್‌ಗೆ 0.012 ಅಮೆರಿಕನ್ ಡಾಲರ್ ಅಂದ್ರೆ ಭಾರತದ ರೂಪಾಯಿಗಳಲ್ಲಿ ಕೇವಲ 89 ಪೈಸೆ ಅನ್ನೋದು ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ.
ಅಂಗೋಲಾ
ವೈವಿಧ್ಯಮಯ ಭೂ ಪ್ರದೇಶವನ್ನು ಹೊಂದಿರುವ ಅಂಗೋಲ ದಕ್ಷಿಣ ಆಫ್ರಿಕಾದ ರಾಷ್ಟ್ರವಾಗಿದೆ. ಇಲ್ಲಿ ಕಡಿಮೆ ಗುಣಮಟ್ಟದ ಜೀವನದ ನಡುವೆ ಪೆಟ್ರೋಲ್ ದರವೂ ಕಡಿಮೆಯಿದೆ. ಪ್ರತಿ ಲೀಟರ್‌ನ ಪೆಟ್ರೋಲ್ ದರವು 0.251 ಅಮೆರಿಕನ್ ಡಾಲರ್ (18 ರುಪಾಯಿ 66 ಪೈಸೆ) ಆಗಿದೆ.
ಅಲ್ಜೀರಿಯ
ಅಲ್ಜೀರಿಯವು ಉತ್ತರ ಆಫ್ರಿಕಾದ ರಾಷ್ಟ್ರವಾಗಿದೆ. ಇಲ್ಲಿನ ಸರ್ಕಾರವು ಜನರಿಗೆ ಸಹಾಯ ಮಾಡಲೆಂದು ನೀಡಿರುವ ತೈಲದ ಮೇಲಿನ ಸಬ್ಸಿಡಿಯು ಹೊರೆಯಾಗಿ ಪರಿಣಮಿಸಿದೆ. ಇಲ್ಲಿನ ಪೆಟ್ರೋಲ್ ದರವು ಲೀಟರ್‌ಗೆ 0.340 ಅಮೆರಿಕನ್ ಡಾಲರ್ (25 ರುಪಾಯಿ 28 ಪೈಸೆ)ನಷ್ಟಿದೆ.
ಕುವೈತ್
ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಕುವೈತ್ ಕೂಡ ಅಗ್ಗದ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತದೆ. ಜನರ ಅನುಕೂಲಕ್ಕಾಗಿ ಅನೇಕ ಸಬ್ಸಿಡಿಗಳನ್ನು ನೀಡಿರುವ ಕುವೈತ್‌ನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.382 ಅಮೆರಿಕನ್ ಡಾಲರ್ (28 ರುಪಾಯಿ 40 ಪೈಸೆ)ನಷ್ಟಿದೆ.
ನೈಜೀರಿಯಾ
ಆಫ್ರಿಕಾದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರ ನೈಜೀರಿಯಾ ಸರ್ಕಾರವೂ ಅಗ್ಗದ ದರದಲ್ಲಿ ಪೆಟ್ರೋಲ್ ವಿತರಿಸುತ್ತದೆ. ಇಲ್ಲಿನ ಪೆಟ್ರೋಲ್ ದರವು ಲೀಟರ್‌ಗೆ 0.402 ಅಮೆರಿಕನ್ ಡಾಲರ್ (28 ರುಪಾಯಿ 89 ಪೈಸೆ)ಆಗಿದೆ
ತುರ್ಕಮೆನಿಸ್ತಾನ್
ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುವ ರಾಷ್ಟ್ರಗಳಲ್ಲಿ ತುರ್ಕಮೆನಿಸ್ತಾನ್ ಕೂಡ ಒಂದಾಗಿದೆ. ಮಧ್ಯ ಏಷ್ಯಾದ ಈ ರಾಷ್ಟ್ರದಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.429 ಅಮೆರಿಕನ್ ಡಾಲರ್ (31 ರುಪಾಯಿ 90 ಪೈಸೆ)ಆಗಿದೆ.
ಕಜಕಿಸ್ತಾನ
ಮಧ್ಯ ಏಷ್ಯಾದ ಮತ್ತೊಂದು ರಾಷ್ಟ್ರವಾದ ಕಜಕಿಸ್ತಾನವು ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಮಾರಾಟ ಮಾಡುವ ರಾಷ್ಟ್ರವಾಗಿದೆ. ಇಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.446 ಅಮೆರಿಕನ್ ಡಾಲರ್ (33 ರುಪಾಯಿ 16 ಪೈಸೆ)ನಷ್ಟಿದೆ.


Click it and Unblock the Notifications