ಕಳೆದ ವರ್ಷ ಈರುಳ್ಳಿ ರೇಟ್ ಆಹಾ ಓಹೋ ಅನ್ನೋ ಹಾಗೆ ಏರಿಕೆ ಕಂಡಿತ್ತು. ಇದೀಗ ಆಲೂಗಡ್ಡೆ ಸರದಿ. ಕಳೆದ ಒಂದು ತಿಂಗಳಿಂದ ಆಲೂಗಡ್ಡೆ ಪೂರೈಕೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ 40% ಏರಿಕೆ ಕಂಡು, ಕೇಜಿಗೆ 35 ರುಪಾಯಿ ಆಗಿದೆ. ಯಾವ ಬಗೆಯ ಮತ್ತು ಗುಣಮಟ್ಟದ ಆಲೂಗಡ್ಡೆ ಎಂಬುದರ ಆಧಾರದಲ್ಲಿ 30ರಿಂದ 45 ರುಪಾಯಿ ಮಧ್ಯೆ ಮಾರಾಟವಾಗುತ್ತಿದೆ.
ಮುಂಬೈನಲ್ಲಿ ಒಂದು ಕೇಜಿಗೆ 35- 45 ರುಪಾಯಿ ಇದ್ದರೆ, ದೆಹಲಿ ಹಾಗೂ ಕೋಲ್ಕತ್ತಾದಲ್ಲಿ 30ರಿಂದ 40 ರುಪಾಯಿ ಇದೆ. ಹೊಸ ಫಸಲು ಬರುವುದಕ್ಕೆ ಆರಂಭವಾಗುವುದು ನವೆಂಬರ್ ನಲ್ಲಿ. ಅಲ್ಲಿಯ ತನಕ ಬೆಲೆ ಕಡಿಮೆ ಆಗುವುದು ಸಾಧ್ಯವಿಲ್ಲ ಎನ್ನುತ್ತಾರೆ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ರಾಜ್ಯವಾದ ಉತ್ತರಪ್ರದೇಶದ ವರ್ತಕರು.
ಈರುಳ್ಳಿಯ ಹಾದಿಯಲ್ಲಿ ಆಲೂಗಡ್ಡೆ
ಹೇಗೆ ಕಳೆದ ವರ್ಷ ಈರುಳ್ಳಿ ಕಡಿಮೆ ಇಳುವರಿ ಬಂದು ಬೆಲೆ ಜಾಸ್ತಿ ಆಗಿತ್ತೋ, ಅದೇ ರೀತಿ ಆಲೂಗಡ್ಡೆಗೂ ಆಗಿದೆ. ಬೆಲೆ ಏರಿಕೆಗೆ ಆಲೂಗಡ್ಡೆ ಫಸಲು ಕಡಿಮೆ ಆಗಿರುವುದೇ ಕಾರಣ. ಕಳೆದ ವರ್ಷ ಪೂರೈಕೆ ಕಡಿಮೆ ಆಗಿದ್ದರಿಂದ ಕೆಲವು ಪ್ರಮುಖ ನಗರಗಳಲ್ಲಿ ಈರುಳ್ಳಿ ಕೇಜಿಗೆ 200 ರುಪಾಯಿ ದಾಟಿತ್ತು.
ನವೆಂಬರ್ ತನಕ ಬೆಲೆ ಇಳಿಯುವ ಸಾಧ್ಯತೆ ಇಲ್ಲ
ಉತ್ತರಪ್ರದೇಶದಲ್ಲಿ ಶೀತಗೃಹ ಒಕ್ಕೂಟಗಳ ಅಧ್ಯಕ್ಷ ಅರವಿಂದ್ ಅಗರ್ ವಾಲ್ ಮಾಧ್ಯಮವೊಂದರ ಜತೆ ಮಾತನಾಡಿ, ಸಗಟು ಮಾರಾಟ ದರವೇ ಕೇಜಿಗೆ 24ರಿಂದ 25 ರುಪಾಯಿ ಇದೆ. ಇನ್ನು ಚಿಲ್ಲರೆ ಮಾರಾಟ ದರ 30ರಿಂದ 35 ರುಪಾಯಿ ಇದೆ. ಕಳೆದ ಮೂರು ವರ್ಷಗಳಿಂದ ಆಲೂಗಡ್ಡೆ ಬೆಳೆಗಾರರು ಬಹಳ ಕೆಟ್ಟ ಸ್ಥಿತಿ ಎದುರಿಸಿದ್ದರು. ಈ ಬಾರಿ ಕನಿಷ್ಠ ಪಕ್ಷ ತಮ್ಮ ಉತ್ಪನ್ನಕ್ಕೆ ಒಂದು ಬೆಲೆಯನ್ನು ಪಡೆಯುತ್ತಾರೆ. ನವೆಂಬರ್ ತನಕ ಬೆಲೆ ಇಳಿಯುವ ಸಾಧ್ಯತೆ ಇಲ್ಲ. ಜತೆಗೆ ತರಕಾರಿ ಬೆಲೆಯೂ ಮೇಲೇರಿದೆ. ಆದ್ದರಿಂದ ಜನರು ಆಲೂಗಡ್ಡೆ ಬಳಕೆ ಹೆಚ್ಚು ಮಾಡಿದ್ದಾರೆ ಎಂದಿದ್ದಾರೆ.
ಅಕಾಲಿಕ ಮಳೆಯಿಂದ ಉತ್ತರಪ್ರದೇಶದಲ್ಲಿ ಬೆಳೆ ನಷ್ಟ
ಉತ್ತರಪ್ರದೇಶದಲ್ಲಿ ವರ್ಷಕ್ಕೆ 15.5 15.8 ಮಿಲಿಯನ್ ಟನ್ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಆದರೆ ಈ ವರ್ಷದ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯ ಕಾರಣಕ್ಕೆ ಆಲೂಗಡ್ಡೆ ಬೆಳೆಯ ಮೇಲೆ ಪರಿಣಾಮ ಆಯಿತು. ಅದರಿಂದ ಬೆಳೆ ನಷ್ಟವಾಯಿತು. ಇನ್ನು ಆಲೂಗಡ್ಡೆ ಅತಿ ಹೆಚ್ಚು ಬೆಳೆಯುವ ಎರಡನೇ ರಾಜ್ಯ ಪಶ್ಚಿಮ ಬಂಗಾಲ. ಅಲ್ಲಿ 1.4 ಮಿಲಿಯನ್ ಟನ್ ಆಲೂಗಡ್ಡೆಗೆ ಕೊರತೆ ಆಗಿದೆ. ಈ ವರ್ಷ ಅಲ್ಲಿ 8.6 ಮಿಲಿಯನ್ ಟನ್ ಬೆಳೆಯಲಾಗಿದೆ. ಸಗಟು ಮಾರುಕಟ್ಟೆಯಲ್ಲೇ ಆಲೂಗಡ್ಡೆ ದರ ಕೇಜಿಗೆ 24ರಿಂದ 24.50 ರುಪಾಯಿ ಇದೆ. ಆದ್ದರಿಂದ ಚಿಲ್ಲರೆ ಮಾರಾಟ ದರವೂ ಹೆಚ್ಚಾಗಿದೆ.
ಪಶ್ಚಿಮ ಬಂಗಾಲದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶ
ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾರಾಟಗಾರರನ್ನು ಮನವಿ ಮಾಡಿ, ಬೆಲೆ ಇಳಿಸುವಂತೆ ಕೇಳಿಕೊಂಡಿದ್ದಾರೆ. ಈ ವಾರದ ಕೊನೆಗೆ ವರ್ತಕರ ಜತೆಗೆ ಸಭೆಯನ್ನು ಕರೆದಿದ್ದು, ಆಲೂಗಡ್ಡೆ ದರದ ಸನ್ನಿವೇಶದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಮಧ್ಯಪ್ರವೇಶ ಮಾಡಿದ ಮೇಲೆ ಪ್ರತಿ ಕೇಜಿಗೆ ಒಂದು ರುಪಾಯಿ ಬೆಲೆ ಕಡಿಮೆ ಆಗಿದೆ ಎಂದು ಅಲ್ಲಿನ ವರ್ತಕರು ಹೇಳಿದ್ದಾರೆ.


Click it and Unblock the Notifications