ಪ್ರಾವಿಡೆಂಟ್ ಫಂಡ್ ಜನರಿಗೆ ಇರುವ ದೀರ್ಘಾವಧಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದು ಉದ್ಯೋಗಿಗಳು ತಮ್ಮ ಹಣವನ್ನು ಉಳಿತಾಯ ಮಾಡಲು ಇರುವ ಅವಕಾಶವಾಗಿದೆ. ಆದರೆ ಹಲವಾರು ಮಂದಿಗೆ ಕಳೆದ ಕೆಲವು ಸಂದರ್ಭಗಳಲ್ಲಿ ಇಪಿಎಫ್ ಬಡ್ಡಿದರವನ್ನು ಕ್ರೆಡಿಟ್ ಮಾಡದಿರುವ ಸಮಸ್ಯೆ ಉಂಟಾಗಿದೆ. ತಮ್ಮ ಪಿಎಫ್ ಖಾತೆ ಇದ್ದರೂ ಕೂಡಾ ಅದಕ್ಕೆ ಬಡ್ಡಿದರ ಹೂಡಿಕೆ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ. 2021-2022ರ ಅವಧಿಯಲ್ಲಿ ಇಪಿಎಫ್ ಬಡ್ಡಿದರವು ಶೇಕಡ 8.1 ಆಗಿದೆ.
ಆದರೆ ಹಲವಾರು ಮಂದಿಗೆ ಇಪಿಎಫ್ ಬಡ್ಡಿದರ ಜಮೆಯಾಗಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ. ಆದರೆ ಪ್ರಾವಿಡೆಂಟ್ ಫಂಡ್ ಪಾಸ್‌ಬುಕ್ ಅನ್ನು ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆಗೆ ಬಡ್ಡಿದರ ಜಮೆಯಾಗುವುದಿಲ್ಲವೇ? ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಪಿಎಫ್‌ಒ ಸದಸ್ಯರಲ್ಲಿ ಹಲವಾರು ವರ್ಷಗಳಿಂದ ಈ ಆತಂಕವಿದೆ. ಈ ಬಗ್ಗೆ ಕೇಂದ್ರ ಸಚಿವ ರಾಮೇಶ್ವರ ತೇಲಿ ಪ್ರತಿಕ್ರಿಯೆ ನೀಡಿದ್ದು, ಈ ಗೊಂದಲವನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಗೊಂದಲಕ್ಕೆ ಸ್ಪಷ್ಟಣೆ ನೀಡಿದ ಸಚಿವರು
ಪಿಎಫ್ ಪಾಸ್‌ಬುಕ್ ಅಪ್‌ಡೇಟ್ ಆಗದಿದ್ದರೆ, ಹಣ ಕಳೆದುಕೊಳ್ಳಬಹುದು ಎಂಬ ಇಪಿಎಫ್‌ಒ ಸದಸ್ಯರಲ್ಲಿ ಇರುವ ಆತಂಕಕ್ಕೆ ಕೇಂದ್ರ ಸಚಿವ ರಾಮೇಶ್ವರ ತೇಲಿ ಸ್ಪಷ್ಟಣೆಯನ್ನು ನೀಡಿದ್ದಾರೆ. "ಮಾರ್ಚ್ 6, 2023 ರವರೆಗೆ ಶೇಕಡ 98ರಷ್ಟು ಸಂಸ್ಥೆಗಳು ತಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸದಸ್ಯರ ಖಾತೆಗಳನ್ನು ಅಪ್‌ಡೇಟ್ ಮಾಡಿದೆ," ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಹೇಳಿದ್ದಾರೆ.
"ಈ (ಬಡ್ಡಿದರ ಜಮೆಯು) ಪ್ರಕ್ರಿಯೆಯು ಮುಂದುವರಿದಿದೆ. ಸಾಫ್ಟ್‌ವೇರ್ ಅಭಿವೃದ್ಧಿಯ ನಂತರ ಇದನ್ನು ನಿಗದಿತ ರೀತಿಯಲ್ಲಿ ಮಾಡಲಾಗುತ್ತಿದೆ. ಮಾರ್ಚ್ 6, 2023 ರ ವೇಳೆಗೆ, ಶೇಕಡ 98 ರಷ್ಟು ಸಂಸ್ಥೆಗಳು ತಮ್ಮ ಇಪಿಎಫ್ ಕೊಡುಗೆ ಸಂಬಂಧಿಸಿದಂತೆ ಪ್ರಕ್ರಿಯೆ ಪೂರ್ಣಗೊಳಿಸಿದೆ," ಎಂದು ಸಚಿವ ರಾಮೇಶ್ವರ್ ತಿಳಿಸಿದ್ದಾರೆ. ಸಚಿವ ರಾಮೇಶ್ವರ್ ತೇಲಿ ಪ್ರಕಾರ, ಬಡ್ಡಿ ಜಮೆಯೊಂದಿಗೆ ಖಾತೆ ಅಪ್‌ಡೇಟ್ ಮಾಡುವುದು ದೀರ್ಘ ಚಟುವಟಿಕೆಯಾಗಿದ್ದು, ಪ್ರತಿಯೊಬ್ಬ ಸದಸ್ಯರ ಖಾತೆಗೆ ಸಂಬಂಧಿಸಿದಂತೆ ಮಾಡಿದ ಪ್ರತಿಯೊಂದು ವಹಿವಾಟಿನ ಪರಿಶೀಲನೆ ಅಗತ್ಯವಾಗಿರುತ್ತದೆ. ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ," ಎಂದು ಹೇಳಿದ್ದಾರೆ.
"ಮಾರ್ಚ್ 6, 2023ರ ಅವಧಿಗೆ ಶೇಕಡ 98ರಷ್ಟು ಖಾತೆಗೆ ಬಡ್ಡಿದರ ಜಮೆ ಮಾಡಲಾಗಿದೆ. ಪ್ರಕ್ರಿಯೆ ಸ್ವಲ್ಪ ತಡವಾಗಬಹುದು. ಪಾಸ್‌ಬುಕ್ ಅಪ್‌ಡೇಟ್ ಮಾಡುವುದು ಕೇವಲ ಒಂದು ಎಂಟ್ರಿ ಪ್ರಕ್ರಿಯೆಯಾಗಿದೆ. ಆದರೆ ಇದಕ್ಕೂ ಬಡ್ಡಿದರ ಜಮೆಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆದಾಯ ತೆರಿಗೆ ಸಂಬಂಧಿತ ಪಿಎಫ್ ನಿಯಮ ತಿಳಿಯಿರಿ
ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ ಪಿಎಫ್ ಪಾವತಿದಾರರು ಇಪಿಎಫ್ ವಿತ್‌ಡ್ರಾ ಮಾಡುವಾಗ ಕೊಂಚ ಎಡವಿದರೂ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಹೌದು ಹೊಸ ನಿಯಮದ ಪ್ರಕಾರ ನೀವು ಪಿಎಫ್ ಖಾತೆಯನ್ನು ತೆರೆದು 5 ವರ್ಷಗಳಾಗಿಲ್ಲದಿದ್ದರೆ, ಪಿಎಫ್ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಿಂತ ಅಧಿಕ ಆದಾಯವನ್ನು ಹೊಂದಿದ್ದರೂ ನಿಮಗೆ ಪಿಎಫ್ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
"ಪ್ಯಾನ್ ಲಿಂಕ್ ಆಗಿರದ ಪ್ರಾವಿಡೆಂಟ್ ಫಂಡ್ ಖಾತೆಗೆ ಪ್ರಸ್ತುತ ಶೇಕಡ 30ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ. ಆದರೆ ಇದನ್ನು ಶೇಕಡ 20ಕ್ಕೆ ಇಳಿಸುವ ನಿರ್ಧಾರವನ್ನು ನಾವು ಮಾಡಿದ್ದೇವೆ. ಇದು ಪ್ಯಾನ್ ಲಿಂಕ್ ಆಗದ ಪ್ರಕರಣಗಳಿಗೆ ಅನ್ವಯವಾಗಲಿದೆ," ಎಂದು ಕೇಂದ್ರ ಹಣಕಾಸು ಸಚಿವೆ ಬಜೆಟ್ ಮಂಡನೆ ಮಾಡುವಾಗ ತಿಳಿಸಿದ್ದಾರೆ.


Click it and Unblock the Notifications