ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ ಉಳಿಸಿಕೊಳ್ಳದಿದ್ದಕ್ಕೆ ಸಾರ್ವಜನಿಕ ರಂಗದ ಬ್ಯಾಂಕುಗಳು ಸುಮಾರು 2,000 ಕೋಟಿ ರುಪಾಯಿ ದಂಡ ಹಾಕಿವೆ ಎಂದು ಸೋಮವಾರ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಮಾಹಿತಿ ಬಹಿರಂಗವಾಗಿದೆ.
2018-19ನೇ ಸಾಲಿನ ಹಣಕಾಸಿನ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳದ ಗ್ರಾಹಕರಿಂದ ಬ್ಯಾಂಕುಗಳು 1996.46 ಕೋಟಿ ರುಪಾಯಿ ದಂಡ ಸಂಗ್ರಹಿಸಿವೆ. 2017-18ರಲ್ಲಿ ಬ್ಯಾಂಕುಗಳು 3,368.42 ಕೋಟಿ ಸಂಗ್ರಹಿಸಿದ್ದು, 2016-17ನೇ ವರ್ಷಕ್ಕಿಂತ 790.22 ಕೋಟಿ ರುಪಾಯಿ ಹೆಚ್ಚಾಗಿದೆ.

ಎಸ್‌ಬಿಐ 2012ರವರೆಗೆ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳದಕ್ಕೆ ಹೆಚ್ಚು ದಂಡವನ್ನು ವಿಧಿಸಿತು. ಮತ್ತು ಏಪ್ರಿಲ್ 1,2017 ರಿಂದ ಪುನಃ ಪರಿಷ್ಕರಿಸಿ ಪರಿಚಯಿಸಿತು. ಆದರೆ ಹೆಚ್ಚಿನ ಶುಲ್ಕದ ವಿಚಾರವಾಗಿ ಸಾಕಷ್ಟು ಟೀಕೆಗಳು ಎದುರಾದ ನಂತರ, ಅಕ್ಟೋಬರ್ 1, 2017ರಿಂದ ಜಾರಿಗೆ ಬರುವಂತೆ ದಂಡವನ್ನು ಕಡಿಮೆ ಮಾಡಿತು.
'ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಲ್ಲಿ ತೆರೆಯಲಾದ ಖಾತೆಗಳನ್ನು ಒಳಗೊಂಡಂತೆ ಮೂಲ ಉಳಿತಾಯ ಖಾತೆಗಳಿಗೆ ಬ್ಯಾಂಕುಗಳು ಅಂತಹ ಯಾವುದೇ ದಂಡವನ್ನು ವಿಧಿಸುವುದಿಲ್ಲ' ಎಂದು ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

'ರಿಸರ್ವ್ ಬ್ಯಾಂಕ್ ಇಂಡಿಯಾದ ಪ್ರಕಾರ 2019ರ ಮಾರ್ಚ್ ಅಂತ್ಯದ ವೇಳೆಗೆ ದೇಶಾದ್ಯಂತ 57.3 ಕೋಟಿ ಮೂಲ ಉಳಿತಾಯ ಖಾತೆಗಳಿವೆ. ಇದರಲ್ಲಿ 35.27 ಕೋಟಿ ಜನ್ ಧನ್ ಖಾತೆಗಳಿದ್ದು, ಈ ಖಾತೆಗಳಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ' ಎಂದು ಠಾಕೂರ್ ಹೇಳಿದ್ದಾರೆ.


Click it and Unblock the Notifications