ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಒಂದು ದಶಕಗಳ ಹಿಂದೆಯೇ ಈ ವರ್ಷದಲ್ಲಿ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಉಂಟಾಗಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅದರಂತೆಯೇ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಕಾಡುತ್ತಿದೆ. ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಕ್ರೆಡಿಟ್ ಸ್ಯೂಸ್ ಬ್ಯಾಂಕ್ ಅನ್ನು ಅಗತ್ಯ ಕ್ರಮ ಕೈಗೊಂಡು ಕಾಪಾಡಲಾಗಿದೆ. ಆದರೆ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಇಲ್ಲಿಗೆ ಮುಗಿದಿಲ್ಲ, ಮುಂದುವರಿಯಲಿದೆ ಎಂದು ರಘುರಾಮ್ ರಾಜನ್ ಎಚ್ಚರಿಸಿದ್ದಾರೆ.
ರಘುರಾಮ್ ರಾಜನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್ ಕೂಡಾ ಹೌದು. ಹಣಕಾಸು ನೀತಿಯನ್ನು ಬಿಗಿಗೊಳಿಸುವುದರಿಂದ ಹಣಕಾಸು ವ್ಯವಸ್ಥೆಯಲ್ಲಿ ದುರ್ಬಲತೆ ಉಂಟಾಗಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. "ನಾನು ಉತ್ತಮ ಆಗಲಿ ಎಂದು ಬಯಸುತ್ತೇನೆ. ಆದರೆ ಇನ್ನೂ ಕೂಡಾ ಹಲವು ತೊಂದರೆಗಳು ಬರಲಿದೆ. ಈಗಾಗಲೇ ನಾವು ನೋಡಿರುವ ಕೆಲವು ಬಿಕ್ಕಟ್ಟು, ಅಸ್ಥಿರತೆಗಳು ಅನಿರೀಕ್ಷಿತವಾಗಿದೆ," ಎಂದು ಗ್ಲಾಸ್‌ಗೋದಲ್ಲಿನ ಸಂದರ್ಶನದಲ್ಲಿ ರಘುರಾಮ್ ರಾಜನ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ಸಂತ ಕ್ಲಾರಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಿಕ್ಕಟ್ಟಿನಲ್ಲಿ ಇರುವ ವಿಚಾರ ಹೊರಬರುತ್ತಿದ್ದಂತೆ ಗ್ರಾಹಕರು ಬ್ಯಾಂಕ್‌ನಲ್ಲಿರುವ ತಮ್ಮ ಹಣವನ್ನು ಜಮೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಭಾರೀ ನಷ್ಟ ಉಂಟಾಗಿದೆ. ಭಾರೀ ನಷ್ಟದಲ್ಲಿದ್ದ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದು ಮುಚ್ಚಿದೆ. ಅದಾದ ಬಳಿಕ ಫಸ್ಟ್ ಸಿಟಿಜನ್ ಬ್ಯಾಂಕ್ ಇದನ್ನು ಖರೀದಿಸಿದೆ. ಅದಾದ ಬಳಿಕ ಸಿಗ್ನೇಚರ್ ಬ್ಯಾಂಕ್ ಕೂಡಾ ನಷ್ಟದಿಂದಾಗಿ ಮುಚ್ಚಲ್ಪಟ್ಟಿದೆ. ಈ ಎಲ್ಲ ಬೆಳವಣಿಗೆಯ ಬಳಿಕ ರಘುರಾಮ್ ರಾಜನ್ ಈ ಎಚ್ಚರಿಕೆಯನ್ನು ನೀಡಿದ್ದಾರೆ.
2005 ರಲ್ಲಿ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದಾಗ, ರಘುರಾಮ್ ರಾಜನ್ ಜಾಕ್ಸನ್ ಹೋಲ್ ಭಾಷಣದಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಜನ್ ಹೇಳಿದ್ದರು. ಬ್ಯಾಂಕಿಂಗ್ ವಲಯದ ಬಗ್ಗೆಯೂ ಎಚ್ಚರಿಕೆಯನ್ನು ನೀಡಿದ್ದರು. ಪ್ರಸ್ತುತ ರಘುರಾಮ್ ರಾಜನ್ ಚಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಹಾಗೆಯೇ 2013 ರಿಂದ 2016 ರವರೆಗೆ ಭಾರತದ ಕೇಂದ್ರ ಬ್ಯಾಂಕ್ ಆದ ಆರ್‌ಬಿಐನ ಗವರ್ನರ್ ಆಗಿದ್ದರು. ಆ ಸಂದರ್ಭದಲ್ಲಿ ಭಾರತೀಯ ಆರ್ಥಿಕತೆಯ ನಿರ್ವಹಣೆಗಾಗಿ ಮೆಚ್ಚುಗೆಯನ್ನು ಪಡೆದಿದ್ದರು.
ಸೆಬಿಯನ್ನು ಪ್ರಶ್ನಿಸಿದ್ದ ರಘುರಾಮ್ ರಾಜನ್
ಈ ಹಿಂದೆ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತಿರುವ ಸೆಬಿ ಮುಂದೆ ಪ್ರಶ್ನೆ ಇಟ್ಟಿದ್ದಾರೆ. "ಅದಾನಿ ಗ್ರೂಪ್ ಸ್ಟಾಕ್‌ನಲ್ಲಿ ಶೇಕಡ 90ರಷ್ಟು ಅಂದರೆ 6.9 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಯ ಮಾರಿಷಸ್ ಫಂಡ್ ಬಗ್ಗೆ ಸೆಬಿ ಯಾಕಿನ್ನು ಆಳವಾದ ತನಿಖೆಗೆ ಇಳಿದಿಲ್ಲ. ಇದಕ್ಕೂ ಕೂಡಾ ಮಾರುಕಟ್ಟೆ ನಿಯಂತ್ರಕರಿಗೆ ಯಾವುದೇ ತನಿಖಾ ಸಂಸ್ಥೆಯ ಸಹಾಯ ಬೇಕೇ?," ಎಂದು ಪ್ರಶ್ನಿಸಿದ್ದಾರೆ.
"ಸರ್ಕಾರ ಮತ್ತು ವ್ಯಾಪಾರದ ನಡುವೆ ಇಲ್ಲದ ಅಪಾರದರ್ಶಕವಾದ ಲಿಂಕ್ ಅನ್ನು ಕಡಿತಗೊಳಿಸುವುದು (ಪಾರದರ್ಶಕತೆ ಹೆಚ್ಚಿಸುವುದು) ಮತ್ತು ನಿಯಂತ್ರಕರು ತಮ್ಮ ಕಾರ್ಯಮಾಡಲು ಬಿಟ್ಟುಬಿಡುವುದು," ಎಂದು ಹೇಳಿದ್ದಾರೆ. ಫಂಡ್‌ಗಳು ಮಾರಿಷಸ್ ಸಂಸ್ಥೆಗಳ ಹೆಸರಲ್ಲಿದೆ. ಹಾಗೆಯೇ ಮಾಲೀಕತ್ವವು ನಿಗೂಢವಾಗಿದೆ. ಈ ಬಗ್ಗೆ ರಾಜನ್ ಧನಿ ಎತ್ತಿದ್ದಾರೆ.


Click it and Unblock the Notifications