ತಮಿಳು ಸಿನಿಮಾರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 'ದರ್ಬಾರ್' ಸಿನಿಮಾದ ಬಿಡುಗಡೆ ದಿನವೇ ಪೈರಸಿ ಕಾಪಿ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ದರ್ಬಾರ್ ಸಿನಿಮಾ ಬಿಡುಗಡೆಗೂ ಮುಂಚೆಯೇ ಪೈರಸಿ ಆತಂಕ ಇದ್ದೇ ಇತ್ತು. ಯಾವುದು ಆಗಬಾರದು ಎಂದುಕೊಳ್ಳಲಾಗುತ್ತಿತ್ತೋ ಅದೇ ಆಗಿದೆ. ಸಿನಿಮಾ ಬಿಡುಗಡೆಯ ಮೊದಲ ದಿನವೇ ಉತ್ತಮ ಗುಣಮಟ್ಟದಲ್ಲಿ ದರ್ಬಾರ್ ಸಿನಿಮಾ ಸೋರಿಕೆ ಮಾಡಲಾಗಿದೆ.
ಈ ಬೆಳವಣಿಗೆಯಿಂದ ಮತ್ತೊಮ್ಮೆ ಪೈರಸಿ ದಂಧೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಬಜೆಟ್ ನ- ದೊಡ್ಡ ಹೀರೋಗಳ ಚಲನಚಿತ್ರಗಳು ಬಿಡುಗಡೆಯಾದ ದಿನವೇ ಪೈರಸಿ ಕಾಪಿಗಳು ಆನ್ ಲೈನ್ ನಲ್ಲಿ ಬರುತ್ತಿವೆ. ಅದರಲ್ಲೂ ತಮಿಳ್ ರಾಕರ್ಸ್ ಹೆಸರು ಇದರಲ್ಲಿ ಕುಖ್ಯಾತಿ ಪಡೆದಿದೆ.
ಎ. ಆರ್. ಮುರುಗದಾಸ್ ನಿರ್ದೇಶನದಲ್ಲಿ, ಲೈಕಾ ಪ್ರೊಡಕ್ಷನ್ ನಿರ್ಮಾಣದ, ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ, ಸುನೀಲ್ ಶೆಟ್ಟಿ, ನಯನತಾರಾ, ಯೋಗಿಬಾಬು ಮತ್ತಿತರರು ಅಭಿನಯಿಸಿರುವ ದರ್ಬಾರ್ ಸಿನಿಮಾ ತಮಿಳು, ತೆಲುಗು, ಹಿಂದಿಯಲ್ಲಿ ಗುರುವಾರ (ಜನವರಿ ಒಂಬತ್ತನೇ ತಾರೀಕು) ಬಿಡುಗಡೆ ಆಗಿದೆ. ವಿಶ್ವದಾದ್ಯಂತ 7 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ದರ್ಬಾರ್ ರಿಲೀಸ್ ಆಗಿದೆ.

ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದ ಹಾಗೆ ದರ್ಬಾರ್ ಸಿನಿಮಾದ ಬಜೆಟ್ ನೂರು ಕೋಟಿ ರುಪಾಯಿಗೂ ಹೆಚ್ಚಿದ್ದು, ಸಿನಿಮಾದ ಪೈರಸಿ ಕಾಪಿ ಬಿಡುಗಡೆ ಆಗಿರುವುದರಿಂದ ಒಟ್ಟಾರೆ ಕಲೆಕ್ಷನ್ ಗೆ ಹೊಡೆತ ಬೀಳಬಹುದು ಎನ್ನಲಾಗುತ್ತಿದೆ. ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ, ಪವನ್ ಕಲ್ಯಾಣ್ ಅಭಿನಯದ ಸರ್ದಾರ್ ಗಬ್ಬರ್ ಸಿಂಗ್ ಸಿನಿಮಾಗಳ ಬಿಡುಗಡೆಗೂ ಮುಂಚೆಯೇ ಆನ್ ಲೈನ್ ನಲ್ಲಿ ಪೈರಸಿ ಕಾಪಿ ಬಂದಿತ್ತು.


Click it and Unblock the Notifications