ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಆತನ ಕುಟುಂಬದವರು 20ಕ್ಕೂ ಹೆಚ್ಚು ಶೆಲ್ ಕಂಪೆನಿಗಳನ್ನು ಸ್ಥಾಪಿಸಿದ್ದರು. ಕಿಕ್ ಬ್ಯಾಕ್ ಗಳನ್ನು ಪಡೆಯುವ ಸಲುವಾಗಿಯೇ ಅವುಗಳನ್ನು ಬಳಸಿಕೊಂಡು, ಆ ಕಿಕ್ ಬ್ಯಾಕ್ ಅನ್ನು ಕಾನೂನುಬಾಹಿರವಾಗಿ ಆಸ್ತಿ ಖರೀದಿಗಾಗಿ ಬಳಸಲಾಗುತ್ತಿತ್ತು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಕಂಡು ಹಿಡಿದಿದೆ.
62 ವರ್ಷ ವಯಸ್ಸಿನ ರಾಣಾ ಕಪೂರ್ ನ ಭಾನುವಾರ ನಸುಕಿನಲ್ಲಿ ಇ.ಡಿ. ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಆತ ಮತ್ತು ಇತರರ ವಿರುದ್ಧ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಯೆಸ್ ಬ್ಯಾಂಕ್ ಮೇಲೆ ಮೂವತ್ತು ದಿನಗಳ ನಿರ್ಬಂಧ ಹೇರಿ, ನಿರ್ದೇಶಕರ ಮಂಡಳಿಯನ್ನು ಸೂಪರ್ ಸೀಡ್ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಕಪೂರ್ ಶೆಲ್ ಕಂಪೆನಿಗಳನ್ನು ಸ್ಥಾಪಿಸಿದ್ದು, ಅವುಗಳ ಮೇಲೆ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ರಾಣಾ ಕಪೂರ್, ಪತ್ನಿ ಮತ್ತು ಮಕ್ಕಳ ನಿಯಂತ್ರಣ ಇತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳು ಯೆಸ್ ಬ್ಯಾಂಕ್ ನಿಂದ ಸಾಲ ಪಡೆದಿವೆಯಲ್ಲಾ, ಅವುಗಳಿಂದ ಕಿಕ್ ಬ್ಯಾಕ್ ಪಡೆಯಲಾಗಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ (ಡಿಎಚ್ ಎಫ್ ಎಲ್) ಎಂಬುದು ದಿವಾಳಿಯಾಗಿರುವ ಗೃಹ ಸಾಲ ನೀಡುವ ಕಂಪೆನಿ. ಇದು ಕಪೂರ್ ಕುಟುಂಬಕ್ಕೆ 600 ಕೋಟಿ ರುಪಾಯಿ ನೀಡಿದೆ ಎಂಬ ಆರೋಪ ಇದೆ. ಅಂದ ಹಾಗೆ ಡಿಎಚ್ ಎಫ್ ಎಲ್ ನಿಂದ ಯೆಸ್ ಬ್ಯಾಂಕ್ ಗೆ 3,700 ಕೋಟಿ ರುಪಾಯಿ ಸಾಲ ಬಾಕಿ ಇದೆ.
ಇ.ಡಿ. ತನಿಖೆಯಿಂದ ಗೊತ್ತಾದ ಅಂಶವೇನೆಂದರೆ, 2,000 ಕೋಟಿ ರುಪಾಯಿ ಮೌಲ್ಯದ ಆಸ್ತಿಯ ಮೇಲೆ ಈ ಕಂಪೆನಿಗಳು ಹೂಡಿಕೆ ಮಾಡಿವೆ. ಸದ್ಯಕ್ಕೆ ಅವುಗಳ ಮಾರುಕಟ್ಟೆ ಮೌಲ್ಯ 5,000 ಕೋಟಿಗೂ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಖಲೆಗಳು ದೊರೆತಿರುವ ಬಗ್ಗೆ ಕೂಡ ತಿಳಿಸಿದ್ದು, ಅದರಂತೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಕಪೂರ್ ಎರಡು ಆಸ್ತಿ ಖರೀದಿ ಮಾಡಿದ್ದಾರೆ.
ಇನ್ನು ಯೆಸ್ ಬ್ಯಾಂಕ್ ಕುಸಿತದ ಬಗ್ಗೆ ಸಿಬಿಐ ಕೂಡ ಪ್ರತ್ಯೇಕ ತನಿಖೆ ನಡೆಸಲಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆ ಸಂಪರ್ಕದಲ್ಲಿದೆ.


Click it and Unblock the Notifications