ನವದೆಹಲಿ, ಏಪ್ರಿಲ್ 25: ಭಾರತೀಯ ರಿಸರ್ವ ಬ್ಯಾಂಕ್ ನ(ಆರ್‌ಬಿಐ) ಡೆಪ್ಯುಟಿ ಗವರ್ನರ್ ಆಗಿರುವ ಟಿ. ರಬಿ ಶಂಕರ್ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
ಮೇ 3, 2024 ರಿಂದ ಜಾರಿಗೆ ಬರುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ ಅವರನ್ನು ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.

ಮೇ 2021 ರ ಮೇ ತಿಂಗಳಲ್ಲಿ ಮೂರು ವರ್ಷದ ಅವಧಿಗೆ ಶಂಕರ್ ಅವರು ಡೆಪ್ಯುಟಿ ಗವರ್ನರ್ ಆಗಿ ನೇಮಕವಾಗಿದ್ದರು. ಅವರ ಸೇವಾವಧಿಯು ಶೀಘ್ರವೇ ಅಂತ್ಯಗೊಳ್ಳಬೇಕಿತ್ತು. ಈ ಹಿನ್ನಲೆ ಕೇಂದ್ರ ಸರ್ಕಾರದ ಸಂಪುಟದ ನೇಮಕಾತಿ ಸಮಿತಿ ಟಿ ರಬಿ ಶಂಕರ್ ಅವರನ್ನು ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಗಿ ಒಂದು ವರ್ಷಕ್ಕೆ ಮರುನೇಮಕ ಮಾಡಿದ್ದು, ಇದು ಮೇ 3, 2024 ರಿಂದ ಅಥವಾ ಮುಂದಿನ ಆದೇಶದವರೆಗೆ ಜಾರಿಗೆ ಬರುತ್ತದೆ.
ಟಿ. ರಬಿ ಶಂಕರ್ ಅವರು 1990 ರಲ್ಲಿ ಆರ್‌ಬಿಐಗೆ ಸೇರಿದ್ದು, ಆ ಬಳಿಕ ರಿಸರ್ವ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬಿಪಿ ಕನುಂಗೋ ಅವರ ನಿವೃತ್ತಿಯ ನಂತರ ಶಂಕರ್ ಅವರನ್ನು ಮೇ 2021 ರಲ್ಲಿ ಡೆಪ್ಯುಟಿ ಗವರ್ನರ್ ನ್ನಾಗಿ ನೇಮಿಸಲಾಗಿತ್ತು. ಈ ಹುದ್ದೆಗೇರುವ ಮೊದಲು, ಶಂಕರ್ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಲ್ಲಿ ಒಬ್ಬರಾಗಿದ್ದರು.
ಆರ್‌ಬಿಐನಲ್ಲಿ, ಕರೆನ್ಸಿ ನಿರ್ವಹಣೆ, ಬಾಹ್ಯ ಹೂಡಿಕೆಗಳು ಮತ್ತು ಕಾರ್ಯಾಚರಣೆಗಳು, ಸರ್ಕಾರ ಮತ್ತು ಬ್ಯಾಂಕ್ ಖಾತೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಪಾವತಿ ಮತ್ತು ಸೆಟಲ್‌ಮೆಂಟ್ ಸಿಸ್ಟಮ್‌ಗಳಂತಹ ಪ್ರಮುಖ ಪೋರ್ಟ್‌ಫೋಲಿಯೊಗಳನ್ನು ಶಂಕರ್ ಅವರು ನಿರ್ವಹಿಸುತ್ತಾರೆ. ಇದಲ್ಲದೆ, ಅವರು ವಿದೇಶಿ ವಿನಿಮಯ ಇಲಾಖೆ, ಆಂತರಿಕ ಸಾಲ ನಿರ್ವಹಣೆ ವಿಭಾಗ ಮತ್ತು ಮಾಹಿತಿ ಹಕ್ಕುಗಳನ್ನು ಸಹ ನಿರ್ವಹಿಸುತ್ತಾರೆ. ಕಾರ್ಯನಿರ್ವಾಹಕ ನಿರ್ದೇಶಕರಾಗಿ ತಮ್ಮ ಹಿಂದಿನ ಪಾತ್ರದಲ್ಲಿ, ಶಂಕರ್ ಅವರು ಪಾವತಿ ಮತ್ತು ಸೆಟ್ಲ್‌ಮೆಂಟ್ ಸಿಸ್ಟಮ್ಸ್ ಇಲಾಖೆ, ಮಾಹಿತಿ ತಂತ್ರಜ್ಞಾನ ಇಲಾಖೆ, ಫಿನ್‌ಟೆಕ್ ಮತ್ತು RBI ನಲ್ಲಿ ಅಪಾಯದ ಮಾನಿಟರಿಂಗ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು.
ವಿನಿಮಯ ದರ ನಿರ್ವಹಣೆ, ಮೀಸಲು ಬಂಡವಾಳ ನಿರ್ವಹಣೆ, ಸಾರ್ವಜನಿಕ ಸಾಲ ನಿರ್ವಹಣೆ, ವಿತ್ತೀಯ ಕಾರ್ಯಾಚರಣೆಗಳು ಮತ್ತು ಅಭಿವೃದ್ಧಿ, ಹಣಕಾಸು ಮಾರುಕಟ್ಟೆಗಳ ನಿಯಂತ್ರಣ ಮತ್ತು ಕಣ್ಗಾವಲು, ಪಾವತಿ ವ್ಯವಸ್ಥೆಗಳು ಮತ್ತು IT ಮೂಲಸೌಕರ್ಯ ಇದು ಶಂಕರ್ ಅವರು ಪರಿಣಿತಿ ಹೊಂದಿರುವ ಕ್ಷೇತ್ರಗಳಾಗಿವೆ.
ರಬಿ ಶಂಕರ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಮಾಡಿದ್ದಾರೆ.ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಗಿರುವ ಜೊತೆಗೆ, ಶಂಕರ್ ಅವರು ಭಾರತೀಯ ಹಣಕಾಸು ತಂತ್ರಜ್ಞಾನ ಮತ್ತು ಅಲೈಡ್ ಸೇವೆಗಳ (ಐಎಫ್‌ಟಿಎಎಸ್) ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರೂ ಆಗಿದ್ದಾರೆ. ಇದರೊಂದಿಗೆ, ಅವರು ರಿಸರ್ವ್ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಪ್ರೈವೇಟ್ ಲಿಮಿಟೆಡ್ (ReBIT) ಮತ್ತು ಆಡಳಿತ ಮಂಡಳಿ IDRBT ಸದಸ್ಯರಾಗಿದ್ದಾರೆ.
ರಬಿ ಅವರು 2005-2011 ರವರೆಗೆ IMF ಸಲಹೆಗಾರರಾಗಿ, ಸರ್ಕಾರಿ ಬಾಂಡ್ ನ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಾಲ ನಿರ್ವಹಣೆಗೆ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟ್ಲ್ಮೆಂಟ್ಸ್ ಮತ್ತು ವಿವಿಧ ಆಂತರಿಕ ಮತ್ತು ಬಾಹ್ಯ ತಜ್ಞರ ಸಮಿತಿಗಳು ಮತ್ತು ಕಾರ್ಯ ಗುಂಪುಗಳಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ RBI ಅನ್ನು ಪ್ರತಿನಿಧಿಸಿದ್ದಾರೆ.


Click it and Unblock the Notifications