ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ಬಾರಿಗೆ ಏಪ್ರಿಲ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸುವ ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ. ಬಹುತೇಕ ಎಲ್ಲ ತಜ್ಞರುಗಳು ರೆಪೋ ದರ ಏರಿಕೆ ನಿರೀಕ್ಷೆ ವ್ಯಕ್ತಪಡಿಸಿದ್ದರೆ, ಆರ್‌ಬಿಐ ಮಾತ್ರ ದರ ಸ್ಥಿರವಾಗಿರಿಸಿದೆ. ಈಗ ಜೂನ್ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಸುತ್ತಾ?
ಪ್ರಸ್ತುತ ರೆಪೋ ದರವು ಶೇಕಡ 6.5ರಷ್ಟಿದೆ. ಅಂದಾಜಿನ ಪ್ರಕಾರ ಜೂನ್ 8ರಂದು ಆರ್‌ಬಿಐ ರೆಪೋ ದರವನ್ನು ಮತ್ತೆ ಸ್ಥಿರವಾಗಿರಿಸುವ ಸಾಧ್ಯತೆಯಿದೆ. ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರವು ಹತೋಟಿಗೆ ಬಂದ ಕಾರಣದಿಂದಾಗಿ ಜೂನ್‌ನ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಬಹುದು ಎಂಬುವುದು ತಜ್ಞರುಗಳು ಅಭಿಪ್ರಾಯವಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ನೇತೃತ್ವದಲ್ಲಿ ಆರು ಮಂದಿ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯು ಜೂನ್ 6ರಿಂದ ಜೂನ್ 8ರವರೆಗೆ ನಡೆಯಲಿದೆ. 43ನೇ ಸಭೆ ಇದಾಗಿದ್ದು, ಈ ಸಭೆಯಲ್ಲಿ ಪ್ರಸ್ತುತ ವಿತ್ತೀಯ ಸ್ಥಿತಿಯ ಬಗ್ಗೆ, ಹಣದುಬ್ಬರ ಸ್ಥಿತಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಂತಿಮವಾಗಿ ರೆಪೋ ದರ ಏರಿಕೆ, ಇಳಿಕೆಯ ನಿರ್ಧಾರ ಘೋಷಣೆ ಮಾಡಲಾಗುತ್ತದೆ.
ಕಳೆದ ವರ್ಷ ಮೇ 2022ರಲ್ಲಿ ಆರ್‌ಬಿಐ ರೆಪೋ ದರ ಏರಿಕೆಯನ್ನು ಆರಂಭ ಮಾಡಿದೆ. ಅದಾದ ಬಳಿಕ ನಿರಂತರವಾಗಿ ದರ ಹೆಚ್ಚಳ ಮಾಡುತ್ತಾ ಬಂದಿದೆ. ಈವರೆಗೆ ಒಟ್ಟಾಗಿ 250 ಮೂಲಾಂಕದಷ್ಟು ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಆದರೆ ಏಪ್ರಿಲ್‌ನಲ್ಲಿ ರೆಪೋ ದರ ಸ್ಥಿರವಾಗಿರಿಸಿದ್ದು ಪ್ರಸ್ತುತ ದರ ಶೇಕಡ 6.5ರಷ್ಟಿದೆ.
ಹಣದುಬ್ಬರ ದರ ಇಳಿಕೆ
ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರ ದರವು 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಪ್ರಸ್ತುತ ಶೇಕಡ 4.7ರಷ್ಟಿದೆ. ಮೇ ತಿಂಗಳಿನಲ್ಲಿ ಈ ಹಣದುಬ್ಬರ ದರವು ಏಪ್ರಿಲ್ ತಿಂಗಳ ದರಕ್ಕಿಂತ ಕಡಿಮೆ ಇರಲಿದೆ ಎಂದು ಇತ್ತೀಚೆಗೆ ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ. ಮೇ ತಿಂಗಳ ಸಿಪಿಐ ಆಧಾರಿತ ಹಣದುಬ್ಬರ ದರವನ್ನು ಜೂನ್ 12ರಂದು ಬಿಡುಗಡೆ ಮಾಡಲಾಗುತ್ತದೆ.
ತಜ್ಞರುಗಳು ಹೇಳುವುದು ಏನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್, "ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸುವ ಸಾಧ್ಯತೆಯಿದೆ. ರೆಪೋ ದರ ಶೇಕಡ 6.5ರಷ್ಟಿದೆ. ಏಪ್ರಿಲ್‌ನಲ್ಲಿ ಹಣದುಬ್ಬರವು ಶೇಕಡ 5ಕ್ಕಿಂತ ಕೆಳಕ್ಕೆ ಇಳಿದಿದೆ. ಮೇ ತಿಂಗಳಿನಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ರೆಪೋ ದರವನ್ನು ಆರ್‌ಬಿಐ ಸ್ಥಿರವಾಗಿರಿಸುವ ನಿರೀಕ್ಷೆಯಿದೆ," ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ 2000 ರೂಪಾಯಿ ನೋಟನ್ನು ಆರ್‌ಬಿಐ ಚಲಾವಣೆಯಿಂದ ರದ್ದುಗೊಳಿಸಿದೆ, ಇದರಿಂದಾಗಿ ಲಿಕ್ವಿಡಿಟಿ ಅಧಿಕವಾಗಿದೆ. ಆರ್‌ಬಿಐ ಪ್ರಸ್ತುತ ಮಾನ್ಸೂನ್ (ಮುಂಗಾರು) ಬೆಳವಣಿಗೆಗಳನ್ನು ಪರಿಶೀಲಿಸುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ. "ಈ ವರ್ಷದಲ್ಲಿ 25-50 ಬಿಪಿಎಸ್‌ನಷ್ಟು ರೆಪೋ ದರವನ್ನು ಕಡಿತ ಮಾಡಬಹುದು. ಆದರೆ ಅದು ಈಗ ಅಲ್ಲ ಅಕ್ಟೋಬರ್ ಬಳಿಕ ಮಾತ್ರ," ಎಂದು ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಆಫ್ ಬರೋಡಾದ ಮ್ಯಾನೆಜಿಂಗ್ ಡೈರೆಕ್ಟರ್ ರಜನೀಶ್ ಕರ್ನಾಟಕ್, "ಆರ್‌ಬಿಐ ಈಗಾಗಲೇ ಶೇಕಡ 2.5ರಷ್ಟು ರೆಪೋ ದರವನ್ನು ಏರಿಕೆ ಮಾಡಿದೆ. ಇದು ಬ್ಯಾಂಕಿಂಗ್ ವಲಯದ ಮೇಲೆ ಅಧಿಕ ಪ್ರಭಾವ ಉಂಟು ಮಾಡಿದೆ. ಈಗಾಗಲೇ ದರ ಹೆಚ್ಚಾಗಿರುವಾಗ ಮತ್ತೆ ಈ ತಿಂಗಳಲ್ಲಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲ," ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯನಿರ್ವಾಹಕ ಅಧಿಕಾರಿ ಆಶೀಶ್ ಪಾಂಡೆ ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ರೆಪೋ ದರವನ್ನು ಆರ್‌ಬಿಐ ಸ್ಥಿರವಾಗಿರಿಸಲಿದೆ ಎಂದಿದ್ದಾರೆ.


Click it and Unblock the Notifications