ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್, "ರೂಪಾಯಿ ಕುಸಿತದ ವಿಚಾರದಲ್ಲಿ ಆರ್‌ಬಿಐ ಯಾವುದೇ ಸಹಿಷ್ಣುತೆ ಹೊಂದಿಲ್ಲ (zero tolerance). ರೂಪಾಯಿ ತನ್ನ ಮೌಲ್ಯವನ್ನು ಮರುಪಡೆಯುವವರೆಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ತೊಡಗಿರುತ್ತದೆ," ಎಂದು ಹೇಳಿದ್ದಾರೆ.
ರೂಪಾಯಿ ಇಷ್ಟೇ ಮೌಲ್ಯವನ್ನು ಹೊಂದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ನಿರ್ದಿಷ್ಟ ಮಟ್ಟವನ್ನು ಹೊಂದಿಲ್ಲ. ಮಾರುಕಟ್ಟೆಯಲ್ಲಿ ಡಾಲರ್‌ಗಳ ನಿಜವಾದ ಕೊರತೆ ಉಂಟಾಗಿದೆ. ಆದ್ದರಿಂದ ಸೆಂಟ್ರಲ್ ಬ್ಯಾಂಕ್ ಡಾಲರ್‌ಗಳನ್ನು ಪೂರೈಕೆ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ ಬ್ಯಾಂಕಿಂಗ್ ಸಮಾವೇಶದಲ್ಲಿ ಮಾತನಾಡಿ ಶಕ್ತಿಕಾಂತ್ ದಾಸ್ ರೂಪಾಯಿ ಕುಸಿತದ ಬಗ್ಗೆ ವಿವರಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಗಾಗಿ ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ನಿರ್ಮಿಸಿದೆ. ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸಲು ಬೇಕಾದಷ್ಟು ಮೀಸಲು ಇದೆ ಎಂದು ಹೇಳಿದ್ದಾರೆ.

ಶುಕ್ರವಾರ ರೂಪಾಯಿ ಮೌಲ್ಯ ಹೇಗಿದೆ?
ನಿರಂತರವಾಗಿ ಡಾಲರ್ ಎದುರು ಕುಸಿತ ಕಂಡಿದ್ದ ರೂಪಾಯಿ ಶುಕ್ರವಾರ ಏರಿಕೆ ಕಂಡಿದೆ. ಇದಕ್ಕೂ ಮುಂಚಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಕಂಡಿದ್ದು ರೂಪಾಯಿ ಮೌಲ್ಯ 80.06ಕ್ಕೆ ಇಳಿದಿದೆ.
ಆದರೆ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಚೇತರಿಸಿಕೊಂಡು 79.8963ಕ್ಕೆ ತಲುಪಿದೆ ಎಂದು ಬ್ಲೂಬರ್ಗ್ ವರದಿ ಮಾಡಿದೆ. ಆದರೆ ಯುಎಸ್ ಡಾಲರ್ ಎದುರು ರೂಪಾಯಿ ಐದು ಪೈಸೆ ಕುಸಿದು 79.90ಕ್ಕೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಹಿಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಿದೆ. ಹಾಗೆಯೇ ಎಫ್‌ಡಿ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ.
ರೂಪಾಯಿ ಕುಸಿತವಾದರೆ ಹಣಕಾಸಿನ ಮೇಲೆ ಭಾರೀ ಪರಿಣಾಮ
ಸಾಮಾನ್ಯವಾಗಿ ರೂಪಾಯಿ ಮೌಲ್ಯವು ಕುಸಿತವಾದರೆ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆಯೂ ಭಾರೀ ಪರಿಣಾಮ ಉಂಟಾಗಲಿದೆ. ರೂಪಾಯಿ ಮೌಲ್ಯ ಕುಸಿತವಾದಂತೆ ಆಮದು ವೆಚ್ಚ ಅಧಿಕವಾಗಲಿದೆ. ಆಮದು ವೆಚ್ಚ ಅಧಿಕವಾದರೆ ಅದರ ಹೊರೆಯು ಜನ ಸಾಮಾನ್ಯರ ಮೇಲೆ ಬೀಳಲಿದೆ.
ಇಂಧನ ಬೆಲೆ ಕೂಡಾ ಅಧಿಕವಾಗುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದಾಗಿ ನಾವು ಅಧಿಕ ಹಣ ಪಾವತಿ ಮಾಡಿ ಕಚ್ಚಾ ತೈಲವನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದಾಗಿ ರೂಪಾಯಿ ಮೌಲ್ಯ ಕುಸಿತವಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರವು ಅಧಿಕವಾಗುವ ಸಾಧ್ಯತೆ ಇದೆ.


Click it and Unblock the Notifications