ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ. ಈ ಹಿಂದೆ ಆರ್‌ಬಿಐ ದಿಡೀರ್ ಆಗಿ ರೆಪೋ ದರ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿತ್ತು.
ಮೇ 4ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಆರ್‌ಬಿಐ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸುವ ಬಗ್ಗೆ ಘೋಷಿಸಿದ್ದರು. ಈ ಹಿನ್ನೆಲೆಯಿಂದಾಗಿ ಜನರಿಗೆ ಸಾಲದ ಇಎಂಐ ಹೊರೆ ಅಧಿಕವಾಗಿತ್ತು. ಈಗ ಮತ್ತೆ ಆರ್‌ಬಿಐ ರೆಪೋ ದರ ಹೆಚ್ಚಿಸಿರುವ ಕಾರಣ ಇಎಂಐ ಹೊರೆ ಮತ್ತೆ ಅಧಿಕವಾಗಲಿದೆ.
Statement by Shri Shaktikanta Das, RBI Governor https://t.co/U3sHH9bKAw
— ReserveBankOfIndia (@RBI) June 8, 2022
ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿದಂತೆ ಎಲ್ಲಾ ಎಂಪಿಸಿಯ ಎಲ್ಲಾ ಆರು ಮಂದಿ ಸದಸ್ಯರ ಸರ್ವಾನುಮತದಲ್ಲಿ ರೆಪೋ ದರ ಏರಿಕೆ ಮಾಡಲಾಗಿದೆ. ಈ ನಡುವೆ ಈಗಾಗಲೇ ಷೇರು ಮಾರುಕಟ್ಟೆ ಕುಸಿತ ಕಂಡಿದೆ.
ಏಪ್ರಿಲ್‌ನಲ್ಲಿ ಹಣದುಬ್ಬರವು ಏರಿಕೆಯಾಗಿದೆ. ಶೇಕಡ 7.79ರಷ್ಟಿದೆ. ಈ ಹಣದುಬ್ಬರ ನಿಯಂತ್ರಣದ ಕ್ರಮವಾಗಿ ಆರ್‌ಬಿಐ ಈಗ ರೆಪೋ ದರವನ್ನು ಮತ್ತೆ ಹೆಚ್ಚಳ ಮಾಡಿದೆ. "ಈ ಹಣಕಾಸು ವರ್ಷದಲ್ಲಿ ಆರು ಶೇಕಡಕ್ಕಿಂತ ಅಧಿಕವಾಗಿ ಹಣದುಬ್ಬರ ದರ ಇರಲಿದೆ. ಹಣದುಬ್ಬರವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ನಾವು ರೆಪೋ ದರವನ್ನು ಹೆಚ್ಚಳ ಮಾಡಿದ್ದೇವೆ," ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
ಎಂಎಸ್ಎಫ್ ದರ ಮತ್ತು ಬ್ಯಾಂಕ್ ದರವನ್ನು 4.65% ರಿಂದ 5.15% ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಕೂಡಾ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.


Click it and Unblock the Notifications