ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ಬೆಂಗಳೂರು ಮೂಲದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ. ಪ್ರತಿ ಖಾತೆಯಿಂದ ಡೆಪಾಸಿಟ್ ಹಿಂಪಡೆಯುವುದಕ್ಕೆ ಮಿತಿಯನ್ನು ಆರ್‌ಬಿಐ ವಿಧಿಸಿದೆ. ಈಗ ನಮ್ಮ ಬೆಂಗಳೂದು ಮೂಲದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಪ್ರತಿ ಖಾತೆಯಿಂದ 50,000 ರೂಪಾಯಿ ವಿತ್‌ಡ್ರಾ ಮಾಡಲು ಮಾತ್ರ ಅವಕಾಶವಿದೆ.
ಪ್ರಸ್ತುತ ಬ್ಯಾಂಕಿನ ಆರ್ಥಿಕ ಸ್ಥಿತಿಯು ದುರ್ಬಲವಾಗಿದ್ದು ಈ ನಿಟ್ಟಿನಲ್ಲಿ ಆರ್‌ಬಿಐ ವಿತ್‌ಡ್ರಾ ಮಿತಿಯನ್ನು ವಿಧಿಸುವ ಕ್ರಮವನ್ನು ಕೈಗೊಂಡಿದೆ. ಇಷ್ಟು ಮಾತ್ರವಲ್ಲದೆ ಕೇಂದ್ರ ಬ್ಯಾಂಕ್‌ನಿಂದ ಪೂರ್ವಾನುಮತಿಯಿಲ್ಲದೆ ಹೊಸದಾಗಿ ಯಾವುದೇ ಸಾಲವನ್ನು ನೀಡಲು ಈ ಕೋ ಆಪರೇಟಿವ್ ಬ್ಯಾಂಕ್‌ಗೆ ನಿರ್ಬಂಧಿಸಲಾಗಿದೆ. ಹಾಗೆಯೇ ಹೊಸದಾಗಿ ಯಾವುದೇ ಡೆಪಾಸಿಟ್‌ಗಳನ್ನು ಮಾಡಬೇಕಾದರೂ ಕೂಡಾ ಆರ್‌ಬಿಐನ ಅನುಮತಿಯನ್ನು ಪಡೆಯುವುದು ಮುಖ್ಯವಾಗುತ್ತದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಡೆಪಾಸಿಟ್ ವಿಮೆ ಕ್ಲೈಮ್‌ಗೆ ಅನುಮತಿ
ಇನ್ನು ಡೆಪಾಸಿಟ್‌ದಾರರು ಡೆಪಾಸಿಟ್ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂಪಾಯಿವರೆಗಿನ ಡೆಪಾಸಿಟ್ ವಿಮಾ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಆದರೆ ಇದು ಬರೀ ವ್ಯಾಪಾರ ನಿರ್ಬಂಧವಾಗಿದೆ, ಬ್ಯಾಂಕಿಂಗ್ ಪರವಾನಗಿಯನ್ನು ರದ್ದು ಮಾಡಲಾಗುತ್ತಿಲ್ಲ ಎಂದು ಆರ್‌ಬಿಐ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
ಎಂದಿನವರೆಗೆ ನಿರ್ಬಂಧ ಇರಲಿದೆ?
ಬ್ಯಾಂಕ್ ತನ್ನ ಆರ್ಥಿಕ ಸ್ಥಿತಿ ಸುಧಾರಿಸುವವರೆಗೆ ನಿರ್ಬಂಧಗಳೊಂದಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳುವುದು ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂದರ್ಭಕ್ಕೆ ಅನುಗುಣವಾಗಿ ಈ ನಿರ್ದೇಶನದಲ್ಲಿ ಬದಲಾವಣೆಯನ್ನು ಮಾಡುತ್ತದೆ ಎಂದು ಕೂಡಾ ಹೇಳಿದೆ. ಜುಲೈ 24, 2023 ರಂದು ಕೊನೆಗೊಂಡ ವ್ಯವಹಾರದಿಂದ ಆರಂಭವಾಗಿ, ಆರು ತಿಂಗಳ ಅವಧಿಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಲಾಗಿದೆ, ಆಗಾಗ ಪರಿಶೀಲನೆ ಮಾಡಲಾಗುತ್ತದೆ ಎಂದು ಆರ್‌ಬಿಐ ಸೇರಿಸಿದೆ.
ಮೇ ತಿಂಗಳಲ್ಲಿ, ಆರ್‌ಬಿಐ ಕೆಲವು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ನ್ಯಾಷನಲ್ ಬ್ಯಾಂಕ್‌ಗೆ ವಿತ್ತೀಯ ದಂಡವನ್ನು ವಿಧಿಸಿತ್ತು. ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯಲ್ಲಿನ ಕೊರತೆಗೆ ಬ್ಯಾಂಕ್ ನಿಯಮಕ್ಕೂ ಮೀರಿ ಅಧಿಕ ದಂಡವನ್ನು ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಿ ಆರ್‌ಬಿಐ ಈ ಹಿಂದೆ ಈ ಬ್ಯಾಂಕ್ ಮೇಲೆ ದಂಡವನ್ನು ವಿಧಿಸಿದೆ. ಈ ರೀತಿಯಲ್ಲಿ ಹಲವಾರು ಬ್ಯಾಂಕ್‌ಗಳ ಮೇಲೆ ದಂಡವನ್ನು ವಿಧಿಸಲಾಗಿದೆ.
ಲಭ್ಯವಿರುವ ಕೊನೆಯ ವಾರ್ಷಿಕ ವರದಿಯ ಪ್ರಕಾರ, ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮಾರ್ಚ್ 31, 2021 ರಂತೆ ಒಟ್ಟು 1,679 ಕೋಟಿ ರೂಪಾಯಿ ಡೆಪಾಸಿಟ್, 1,128 ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಆ ದಿನಾಂಕದ ನಂತರ ಡೇಟಾ ಲಭ್ಯವಿಲ್ಲ. ಅಲ್ಲದೆ, ಮಾರ್ಚ್ 31, 2021 ರಂತೆ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇಕಡ 27.81 ರಷ್ಟಿದ್ದರೆ, ವಾರ್ಷಿಕ ವರದಿಯ ಪ್ರಕಾರ ಅದು ಶೇಕಡ 12.12ಕ್ಕೆ ಇಳಿಕೆಯಾಗಿದೆ.
ಬೆಂಗಳೂರು ಮತ್ತು ಮೈಸೂರಿನ ವಿವಿಧ ಭಾಗಗಳಲ್ಲಿ ಬ್ಯಾಂಕ್ ಸುಮಾರು 13 ಶಾಖೆಗಳನ್ನು ಹೊಂದಿದೆ. ಮೈಸೂರಿನ ಕುವೆಂಪು ನಗರದಲ್ಲಿ ಈ ಬ್ಯಾಂಕ್ ತನ್ನ ಶಾಖೆಯನ್ನು ಹೊಂದಿದೆ. ಅದನ್ನು ಹೊರತುಪಡಿಸಿ, ಬೆಂಗಳೂರಿನ ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿನಗರ, ಬಾಣಸವಾಡಿ, ಬನಶಂಕರಿ 2ನೇ ಹಂತ, ಕೋರಮಂಗಲ, ಗಾಂಧಿ ಬಜಾರ್, ಜಯನಗರ 5ನೇ ಬ್ಲಾಕ್, ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3ನೇ ಹಂತಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.


Click it and Unblock the Notifications