ಆರ್‌ಬಿಐ ರೆಪೋ ದರ ಶೇಕಡ 6.5ರಲ್ಲಿ ಸ್ಥಿರವಾಗಿರಿಸುವ ಘೋಷಣೆ ಮಾಡಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಎಲ್ಲ ಸೆಕ್ಟರ್‌ಗಳು ಏರಿಕೆ ಕಂಡಿದೆ. ನಿರೀಕ್ಷೆಯಂತೆಯೇ ಆರ್‌ಬಿಐ ರೆಪೋ ದರ ಸ್ಥಿರವಾಗಿರಿಸಿದೆ. ಇದಕ್ಕೆ ಪಾಸಿಟಿವ್ ಆಗಿ ಷೇರುಪೇಟೆಯು ಪ್ರತಿಕ್ರಿಯೆಯನ್ನು ನೀಡಿದೆ.
ರೆಪೋ ದರ ಘೋಷಣೆಯನ್ನು ಮಾಡಿದ ಕೂಡಲೇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ತಮ್ಮ ದಿನದ ಗರಿಷ್ಠ ಮಟ್ಟಕ್ಕೆ ತಲುಪಿ ವಹಿವಾಟು ನಡೆಸಿದೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಏರಿಕೆಯಾಗಿದೆ. ಖಾಸಗಿ ಮತ್ತು ಪಿಎಸ್‌ಯು ಬ್ಯಾಂಕ್‌ಗಳ ಷೇರುಗಳು ಸಹ ಗ್ರೀನ್ ಜೋನ್‌ನಲ್ಲಿದೆ, ಅಂದರೆ ಏರಿಕೆಯಾಗಿದೆ.

ಸೆನ್ಸೆಕ್ಸ್, ನಿಫ್ಟಿ ಎಷ್ಟು ಏರಿಕೆ?
ಈ ಸಮಯಕ್ಕೆ ಸೆನ್ಸೆಕ್ಸ್ ಸುಮಾರು ಶೇಕಡ 0.52 ರಷ್ಟು ಅಥವಾ 335.83 ಅಂಕ ಏರಿಕೆಯಾಗಿ, 65,967.40 ಕ್ಕೆ ತಲುಪಿದೆ. ಇನ್ನು ನಿಫ್ಟಿ 50 ಸುಮಾರು ಶೇಕಡ 0.52 ರಷ್ಟು ಜಿಗಿತ ಕಂಡು ಅಥವಾ 100.85 ಅಂಕ ಏರಿಕೆಯಾಗಿ 19,646.60 ರಲ್ಲಿ ವಹಿವಾಟು ನಡೆಸುತ್ತಿದೆ. ಎಲ್ಲ ಸೆಕ್ಟರ್‌ಗಳು ಇಂದು ಶೈನ್ ಆಗಿದೆ. ಅದರಲ್ಲೂ ಬಜಾಜ್ ಫೈನಾನ್ಸ್ ಟಾಪ್ ಗೇನರ್ ಆಗಿದೆ.
ಈ ಸಮಯಕ್ಕೆ ಬ್ಯಾಂಕ್ ನಿಫ್ಟಿ ಸುಮಾರು ಶೇಕಡ 0.37 ರಷ್ಟು ಏರಿಕೆಯಾಗಿ ಅಥವಾ 164.05 ಅಂಕ ಜಿಗಿದು, 44,377.40 ಕ್ಕೆ ತಲುಪಿದೆ. ಕೆಲವು ನಿಮಿಷಗಳ ಹಿಂದೆ ಬ್ಯಾಂಕ್ ನಿಫ್ಟಿ 44,317ರ ಆಸುಪಾಸಿನಲ್ಲಿತ್ತು. ಬಜಾಜ್ ಫಿನ್‌ಸರ್ವ್ ಈ ದಿನದ ವಹಿವಾಟಿನ ನಡುವೆ ಸುಮಾರು ಶೇಕಡ 2.3 ರಷ್ಟು ಏರಿದ್ದರೆ, ಬಜಾಜ್ ಫೈನಾನ್ಸ್ ಸುಮಾರು ಶೇಕಡ 1.4 ರಷ್ಟು ಏರಿಕೆಯಾಗಿದೆ.
ಟಾಪ್ ಗೇನರ್, ಲೂಸರ್ ಸ್ಟಾಕ್
ಬಜಾಜ್ ಫಿನ್‌ಸರ್ವ್ ಟಾಪ್ ಗೇನರ್ ಆಗಿದ್ದು, ಸ್ಟಾಕ್ ಈ ಸಮಯಕ್ಕೆ ಸುಮಾರು ಶೇಕಡ 3.18 ರಷ್ಟು ಏರಿಕೆಯಾಗಿ, 1,591.60 ರೂಪಾಯಿಗೆ ತಲುಪಿದೆ. ಒಎನ್‌ಜಿಸಿ ಸ್ಟಾಕ್ ಇಂದು ಭಾರೀ ನಷ್ಟ ಕಂಡ ಸ್ಟಾಕ್ ಆಗಿದ್ದು, ಶೇಕಡ 0.69 ರಷ್ಟು ಇಳಿದು 180.95 ರೂಪಾಯಿಗೆ ಸ್ಟಾಕ್ ಕುಸಿದಿದೆ.
ತಜ್ಞರು ಹೇಳುವುದೇನು?
"ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆಯೂ ಆರ್‌ಬಿಐ ರೆಪೋ ದರ ಸ್ಥಿರವಾಗಿರಿಸುವ ನಿರ್ಧಾರ ಮಾಡಿದೆ. ಇದನ್ನು ಷೇರು ಮಾರುಕಟ್ಟೆ ಪಾಲಿಸಿಟ್ ಆಗಿ ಸ್ವೀಕರಿಸಿದೆ. ಅದೇನೇ ಇದ್ದರೂ, ಈ ನಿರ್ಧಾರದ ಪರಿಣಾಮವು ಸೀಮಿತವಾಗಿರಬಹುದು ಎಂಬ ನಿರೀಕ್ಷೆಯಿದೆ," ಎಂದು ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ ವಿ ಕೆ ವಿಜಯಕುಮಾರ್, "ಎಂಪಿಸಿಯ ಹಣಕಾಸು ನೀತಿಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಯಾಕೆಂದರೆ ನೀತಿ ದರದಲ್ಲಿ ಯಾವುದೇ ಬದಲಾವಣೆಯನ್ನು ಆರ್‌ಬಿಐ ಮಾಡದು ಎಂಬ ನಿರೀಕ್ಷೆಯಿದೆ. ಇದು ಮಾರುಕಟ್ಟೆ ದೃಷ್ಟಿಕೋನದಲ್ಲಿ ನಿರೀಕ್ಷಿತ ಯುಎಸ್ ಉದ್ಯೋಗ ಡೇಟಾ ಅತೀ ಮುಖ್ಯ ವಿಚಾರವಾಗಿದೆ," ಎಂದು ಹೇಳಿದರು.
"ಯುಎಸ್ ಉದ್ಯೋಗ ಡೇಟಾ ಬಲವಾಗಿದ್ದರೆ, ಮಾರುಕಟ್ಟೆಯು ಏರಿಕೆಯೊಂದಿಗೆ ಸಾಗಬಹುದು. ಡೇಟಾ ದುರ್ಬಲವಾದರೆ ಮಾರುಕಟ್ಟೆಯು ಕೂಡಾ ದುರ್ಬಲವಾಗಬಹುದು," ಎಂಬುವುದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಡಾ ವಿ ಕೆ ವಿಜಯಕುಮಾರ್ ಅಭಿಪ್ರಾಯವಾಗಿದೆ.
"ನಿರೀಕ್ಷಿತ ಎರಡನೇ ತ್ರೈಮಾಸಿಕ ವರದಿಯು ಷೇರುಗಳ ಬೆಲೆ ಮೇಲೆ ಪ್ರಭಾವ ಬೀರಲಿದೆ. ಹಣಕಾಸು, ನಿರ್ದಿಷ್ಟವಾಗಿ ಬ್ಯಾಂಕಿಂಗ್, ಆಟೋಮೊಬೈಲ್, ಹೋಟೆಲ್‌ಗಳು, ರಿಯಲ್ ಎಸ್ಟೇಟ್, ಸಿಮೆಂಟ್ ಸ್ಟಾಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ," ಎಂದು ತಿಳಿಸಿದರು.
ಗಮನಿಸಿ: ಈ ಮೇಲಿನ ಲೇಖನದಲ್ಲಿ ಮಾರುಕಟ್ಟೆ ತಜ್ಞರು ಕೆಲವು ಶಿಫಾರಸುಗಳನ್ನು ಮಾಡಿದ್ದಾರೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications