ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದೆ.
ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ (ಆಗಸ್ಟ್ 06) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಅನಿಶ್ಚಿತತೆ ಮತ್ತು ಹಣದುಬ್ಬರದ ಮೇಲಿನ ಆತಂಕಗಳ ನಡುವೆ ಆರ್‌ಬಿಐ ಶುಕ್ರವಾರ ಬಡ್ಡಿದರವನ್ನು ಬದಲಿಸಲಿಲ್ಲ.ಈ ಹಿಂದೆ ಹಲವು ತಿಂಗಳಿನಿಂದ ಆರ್‌ಬಿಐ ರೆಪೋ ಹಾಗೂ ರಿವರ್ಸ್ ರೆಪೋ ದರ ಬದಲಾಯಿಸದೇ ಉಳಿಸಿದೆ.
ರೆಪೋ, ರಿವರ್ಸ್ ರೆಪೋ ದರ ಬದಲಾವಣೆ ಇಲ್ಲ
ಶುಕ್ರವಾರ (ಆಗಸ್ಟ್ 06) ಆರ್‌ಬಿಐ ಹಣಕಾಸು ನೀತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಭಾರತದ ಜಿಡಿಪಿ ದರ 9.5% ಅಂದಾಜು
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಮುನ್ಸೂಚನೆಯನ್ನು ಪರಿಶೀಲನೆ ಮಾಡಿರುವ ಆರ್‌ಬಿಐ ಶೇ. 9.5ರಷ್ಟು ದಾಖಲಾಗಬಹುದು ಎಂದು ಅಂದಾಜಿಸಿದೆ. ಈ ಮೊದಲು ಇನ್ನು ಆರ್‌ಬಿಐ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ತಗ್ಗಿಸಿತ್ತು. ಇದೀಗ ಈ ಅಂದಾಜನ್ನು ಬದಲಾಯಿಸದೆ ಮುಂದುವರಿಸಿದೆ.
ಇದರ ನಡುವೆ ಸಿಪಿಐ ಹಣದುಬ್ಬರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 5.7ರಷ್ಟು ಎಂದು ಅಂದಾಜಿಸಲಾಗಿದೆ.
ಸಿಪಿಐ ಹಣದುಬ್ಬರ ಶೇಕಡಾ 5.7ರಷ್ಟು ಅಂದಾಜು
ಇದರ ನಡುವೆ ಸಿಪಿಐ ಹಣದುಬ್ಬರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 5.7ರಷ್ಟು ಎಂದು ಅಂದಾಜಿಸಲಾಗಿದೆ. ದ್ವಿತೀಯ ತ್ರೈಮಾಸಿಕದಲ್ಲಿ ಶೇಕಡಾ 5.9, ತೃತೀಯ ತ್ರೈಮಾಸಿಕದಲ್ಲಿ ಶೇ. 5.3ರಷ್ಟು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.8ರಷ್ಟು ಎಂದು ಆರ್‌ಬಿಐ ತಿಳಿಸಿದೆ.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.
ರೆಪೋ ದರವನ್ನು ಹೇಗೆ ವಿಧಿಸಲಾಗುತ್ತದೆ?
ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೊ ದರವಾಗಿದೆ. ಬ್ಯಾಂಕುಗಳಿಗೆ ಸಾಲ ಪಡೆಯುವುದು ಹೆಚ್ಚು ಕಠಿಣಗೊಳಿಸಲು ಆರ್‌ಬಿಐ ಇಚ್ಚಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೂ ರೆಪೊ ದರಗಳನ್ನು ಹೆಚ್ಚಿಸುತ್ತದೆ.
ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ.
ರೆಪೋ ದರದ ಇಳಿಕೆಯಿಂದ ಲಾಭವೇನು?
ಹಣದ ಬಿಕ್ಕಟ್ಟು ಅಂದರೆ ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾದಾಗ ರಿಸರ್ವ್ ಬ್ಯಾಂಕ್, ರೆಪೋ ದರವನ್ನು ಇಳಿಸುವ ಕ್ರಮ ಕೈಗೊಳ್ಳುತ್ತದೆ. ಆರ್‌ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತದೆ. ಮಾರುಕಟ್ಟೆಗೆ ಹೆಚ್ಚು ಹಣ ಹರಿಯುತ್ತದೆ. ಇದು ಆರ್ಥಿಕತೆಗೆ ಬಲ ನೀಡುವ ನಿರೀಕ್ಷೆ ಇದೆ. ಜೊತೆಗೆ ಬ್ಯಾಂಕ್‌ಗಳಲ್ಲಿನ ಸಾಲದ ಬಡ್ಡಿ ದರವು ಇಳಿಕೆಯಾಗುತ್ತದೆ.
ರಿವರ್ಸ್ ರೆಪೊ ದರ ಎಂದರೇನು?
ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ಹೀಗಾಗಿ ಇದು ರೆಪೊ ದರಕ್ಕಿಂತ ಸಂಪೂರ್ಣ ವಿಭಿನ್ನ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.
ರಿವರ್ಸ್ ರೆಪೊ ದರ ಹೇಗೆ ವಿಧಿಸಲಾಗುತ್ತದೆ?
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಧಿಕ ಹಣವು ಚಲಾವಣೆಯಾಗುತ್ತಿದೆ ಎಂದು ಅನಿಸಿದರೆ ಆರ್‌ಬಿಐ ರಿವರ್ಸ್ ರೆಪೊ ಎಂಬ ಆಯುಧವನ್ನು ಬಳಸುತ್ತದೆ. ಎಲ್ಲಾದರೂ ರಿವರ್ಸ್ ರೆಪೊ ದರ ಹೆಚ್ಚಾಗಿದೆಯೆಂದರೆ ಆರ್ ಬಿಐ ಬ್ಯಾಂಕುಗಳಿಂದ ಆಕರ್ಷಕ ಬಡ್ಡಿದರಕ್ಕೆ ಹಣ ಸಾಲ ಪಡೆಯುತ್ತಿದೆ ಎಂದರ್ಥ. ಬ್ಯಾಂಕುಗಳು ಕೂಡ ಆರ್‌ಬಿಐಗೆ ಸಂಪೂರ್ಣ ಖುಷಿಯಿಂದಲೇ ಸಾಲ ನೀಡುತ್ತವೆ.
ಯಾಕೆಂದರೆ ಸುರಕ್ಷಿತ ಕೈಗೆ ಸಾಲ ಹಸ್ತಾಂತರಿಸಲಾಗಿದೆ ಎಂಬ ಸಂತೃಪ್ತಿ ಒಂದೆಡೆ ಮತ್ತು ಸಮರ್ಪಕ ಬಡ್ಡಿದರ ದೊರಕುತ್ತದೆ ಎನ್ನುವ ತೃಪ್ತಿ ಇನ್ನೊಂದೆಡೆ ಬ್ಯಾಂಕುಗಳಿಗಿರುತ್ತವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವು ಸಮರ್ಪಕವಾಗಿರಲು ಆರ್‌ಬಿಐ ರೆಪೊ ಮತ್ತು ರಿವರ್ಸ್ ರೆಪೊ ಎಂಬ ಹರಿಗೋಲು ಬಳಕೆ ಮಾಡುತ್ತಿದೆ ಎನ್ನಬಹುದು.


Click it and Unblock the Notifications