ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾಗತಿಕವಾಗಿ ಹಾಗೂ ದೇಶದಲ್ಲಿ ಕಾಡುತ್ತಿರುವ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ, ಮೇ ತಿಂಗಳಿನಿಂದ ಈವರೆಗೆ ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐನ ಎಲ್ಲ ಕ್ರಮಗಳು ಜನರ ಮೇಲೆ ಪ್ರಭಾವ ಬೀರುತ್ತದೆ. ಅದರಂತೆಯೇ ಈ ಬಡ್ಡಿದರ ಏರಿಕೆಯೂ ಕೂಡಾ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ.
ಅಕ್ಟೋಬರ್ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹಣದುಬ್ಬರವು ಶೇಕಡ 7.41ರಿಂದ ಶೇಕಡ 6.77ಕ್ಕೆ ಇಳಿಕೆಯಾಗಿದೆ. ಆದರೆ ಡಿಸೆಂಬರ್‌ನಲ್ಲಿ ನಡೆಯುವ ಆರ್‌ಬಿಐ ಸಭೆಯ ಬಳಿಕ ಕೇಂದ್ರ ಬ್ಯಾಂಕ್ ಮತ್ತೆ ರೆಪೋ ದರವನ್ನು 35 ಮೂಲಾಂಕ ಹೆಚ್ಚಿಸುವ ಸಾಧ್ಯತೆ ಇದೆ.
ಈ ಹಿಂದೆ ಆರ್‌ಬಿಐ ಸುಮಾರು 50 ಮೂಲಾಂಕ ರೆಪೋ ದರವನ್ನು ಏರಿಸುತ್ತಾ ಬಂದಿದೆ. ಈ ಹಿಂದಿನ ಪರಿಷ್ಕರಣೆಗೆ ನಾವು ಹೋಲಿಕೆ ಮಾಡಿದಾಗ ಮುಂದಿನ ತಿಂಗಳಲ್ಲಿ ಆರ್‌ಬಿಐ ಕೊಂಚ ಕಡಿಮೆಯೇ ದರ ಏರಿಕೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೆ ಜನರಿಗೆ ಕೇಂದ್ರ ಬ್ಯಾಂಕ್‌ನ ವಿತ್ತೀಯ ನೀತಿ ಬದಲಾವಣೆಯಿಂದಾಗಿ ಆಗುವ ಪರಿಣಾಮವೇನು ತಪ್ಪಿದಲ್ಲ.
ಮುಂದಿನ ಎಂಪಿಸಿ ಸಭೆ ಯಾವಾಗ?
ಮೇ ತಿಂಗಳಿನಿಂದ ಈವರೆಗೆ ಆರ್‌ಬಿಐ ರೆಪೋ ದರವನ್ನು ಸುಮಾರು 190 ಬಿಪಿಎಸ್ ಹೆಚ್ಚಳ ಮಾಡಿದ್ದು ಪ್ರಸ್ತುತ ದರ ಶೇಕಡ 5.90ರಷ್ಟಿದೆ. ಈ ನಡುವೆ ಹಣದುಬ್ಬರವು ಸತತ ಹತ್ತನೇ ತಿಂಗಳು ಆರ್‌ಬಿಐನ ಶೇಕಡ 2ರಿಂದ ಶೇಕಡ 6ರ ಮಿತಿಗಿಂತ ಅಧಿಕವಾಗಿದೆ. ಈ ಕಾರಣದಿಂದಾಗಿ ಡಿಸೆಂಬರ್ 7ರಂದು ನಡೆಯುವ ಎಂಪಿಸಿ ಸಭೆಯಲ್ಲಿ ಮತ್ತೆ ರೆಪೋ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಸಣ್ಣ ಪ್ರಮಾಣದಲ್ಲಿ ದರ ಹೆಚ್ಚಳ
ಅಕ್ಟೋಬರ್ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಶೇಕಡ 7.41ಕ್ಕೆ ಏರಿಕೆಯಾಗಿದ್ದ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡ 6.77ಕ್ಕೆ ಕುಗ್ಗಿದೆ. ಪ್ರಸ್ತುತ ಕೆಲವು ಆಹಾರ ಪದಾರ್ಥಗಳ ಬೆಲೆಯು ಇಳಿಕೆಯಾಗಿದೆ. ಇದು ಹಣದುಬ್ಬರ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ. ಆದರೂ ಇನ್ನು ಕೂಡಾ ಹಣದುಬ್ಬರ ಆರ್‌ಬಿಐನ ಮಿತಿಗಿಂತ ಅಧಿಕವಾಗಿದೆ. ಅದಕ್ಕಾಗಿ ಡಿಸೆಂಬರ್‌ನಲ್ಲಿ ನಡೆಯುವ ಸಭೆಯ ಬಳಿಕ ಸಣ್ಣ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಬಹುದು ಎಂದು ಕೂಡಾ ತಜ್ಞರುಗಳು ಅಭಿಪ್ರಾಯಿಸಿದ್ದಾರೆ.
ತಜ್ಞರ ಅಭಿಪ್ರಾಯ ಹೇಗಿದೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೊಮೋರಾದ ಅರ್ಥಶಾಸ್ತ್ರಜ್ಞರಾದ ಸೋನಲ್ ವರ್ಮಾ, ಔರ್‌ದೀಪ್ ನಂದಿ, "ಡಿಸೆಂಬರ್‌ನಲ್ಲಿ ಆರ್‌ಬಿಐ ಸುಮಾರು 35 ಬಿಪಿಎಸ್ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಹಾಗೆಯೇ ಪೆಬ್ರವರಿಯಲ್ಲಿ 25 ಬಿಪಿಎಸ್ ದರ ಹೆಚ್ಚಿಸುವ ಸಾಧ್ಯತೆಯಿದೆ. ಒಟ್ಟಾಗಿ ರೆಪೋ ದರ ಫೆಬ್ರವರಿ ವೇಳೆಗೆ ಶೇಕಡ 6.50ಕ್ಕೆ ಏರಲಿದೆ," ಎಂದು ತಿಳಿಸಿದ್ದಾರೆ. ಇನ್ನು ಹಣದುಬ್ಬರವು ನವೆಂಬರ್‌ನಲ್ಲಿ ಶೇಕಡ 6.5ಕ್ಕೆ ಇಳಿಯಲಿದೆ ಎಂಬ ಅಭಿಪ್ರಾಯವಿದೆ. ಆದರೆ ಇಂಡಿಯಾ ರೇಟಿಂಗ್ಸ್ "ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೋ ದರ 25 ಮೂಲಾಂಕ ಏರಿಸಲಿದೆ," ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಸಲಿರುವ ಆರ್‌ಬಿಐ
ಆರ್‌ಬಿಐ ಸತತ ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದ್ದರೂ ಕೂಡಾ ಹಣದುಬ್ಬರವು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಆರ್‌ಬಿಐ ನವೆಂಬರ್ 3ರಂದು ಸಭೆಯನ್ನು ನಡೆಸಿದೆ. ಈ ಸಭೆಯ ಬಳಿಕ ಒಂದು ತಿಂಗಳ ಒಳಗೆ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ. ಈ ವರದಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ವಿವರ ಇರಲಿದೆ. ಸಾಮಾನ್ಯವಾಗಿ ಆರ್‌ಬಿಐ ಒಂದು ಹಣಕಾಸು ವರ್ಷದಲ್ಲಿ ಆರು ಬಾರಿ ಎಂಪಿಸಿ ಸಭೆಯನ್ನು ಸೇರುತ್ತದೆ ಹಾಗೂ ಈ ಸಭೆಯು ಪೂರ್ವನಿರ್ಧರಿತವಾಗಿರುತ್ತದೆ. ಆದರೆ ನವೆಂಬರ್ 3ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಯ್ದೆ 1934ರ ಸೆಕ್ಷನ್ 45ZN ಅಡಿಯಲ್ಲಿ ಸಭೆಯನ್ನು ನಡೆಸಲಾಗಿದೆ.


Click it and Unblock the Notifications