ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡುತ್ತಲೇ ಇದೆ. ಈಗ ಮುಂದಿನ ವಾರದಲ್ಲಿ ಆರ್‌ಬಿಐ ರೆಪೋ ದರವನ್ನು ಸುಮಾರು 35 ಮೂಲಾಂಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬುಧವಾರ ಈ ಬಗ್ಗೆ ಅಮೆರಿಕದ ಬ್ರೋಕರೇಜ್ ಸಂಸ್ಥೆ ಹೇಳಿದೆ.
ಆಗಸ್ಟ್ 5 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಸಮಿತಿ (MPC) ಬಳಿಕ ವರದಿಯನ್ನು ಪ್ರಕಟ ಮಾಡಲಿದೆ. ಈ ಸಂದರ್ಭದಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಬೋಫಾ ಸೆಕ್ಯುರಿಟೀಸ್ ವರದಿ ಹೇಳಿದೆ.
ಆರ್‌ಬಿಐ ಮೇ ಹಾಗೂ ಜೂನ್ ತಿಂಗಳಿನಲ್ಲಿ ವಿತ್ತೀಯ ನೀತಿಯಲ್ಲಿ ಬದಲಾವಣೆಯನ್ನು ಮಾಡಿದೆ. ಎರಡು ತಿಂಗಳಿನಲ್ಲಿ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರವನ್ನು ಸುಮಾರು ಶೇಕಡಾ 0.90 ರಷ್ಟು ಹೆಚ್ಚಿಸಿದೆ.

ಆರ್‌ಬಿಐ ಸ್ಥಾಯಿ ಠೇವಣಿ ಸೌಲಭ್ಯವನ್ನು ಪರಿಚಯಿಸಿದಾಗ ಏಪ್ರಿಲ್‌ನಿಂದ ನೀತಿ ಕ್ರಮಗಳನ್ನು ಉಲ್ಲೇಖಿಸಿ, ಕೇಂದ್ರ ಬ್ಯಾಂಕ್ ಪರಿಣಾಮಕಾರಿಯಾಗಿ ಶೇಕಡಾ 1.30 ರಷ್ಟು ದರಗಳನ್ನು ಹೆಚ್ಚಿಸಿದೆ ಎಂದು ಬ್ರೋಕರೇಜ್ ಹೇಳಿದೆ.
"ಆರ್‌ಬಿಐ ಎಂಪಿಸಿಯಲ್ಲಿ ರೆಪೋ ದರವನ್ನು ಶೇಕಡ 0.35ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ರೆಪೋ ದರವು ಸುಮಾರು ಶೇಕಡ 5.25ಕ್ಕೆ ಏರಿಕೆಯಾಗಬಹುದು. ಹಾಗೆಯೇ ಎಂಪಿಸಿಯು ಹಣಕಾಸು ವರ್ಷ 2023ರಲ್ಲಿ ಗ್ರಾಹಕ ಬೆಲೆ ಹಣದುಬ್ಬರ (CPI) ಮತ್ತು ಜಿಡಿಪಿ ಬೆಳವಣಿಗೆ ದರವನ್ನು ಕ್ರಮವಾಗಿ ಶೇಕಡ 6.7 ಮತ್ತು ಶೇಕಡ 7.2ರಷ್ಟು ಉಳಿಸಿಕೊಳ್ಳುತ್ತದೆ ಎಂದು ಬ್ರೋಕರೇಜ್ ನಿರೀಕ್ಷೆ ಹೊಂದಿದೆ. ಕಳೆದ ವಾರ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಏಪ್ರಿಲ್‌ನಲ್ಲಿ ಶೇ 7.04 ರಷ್ಟಿದ್ದ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ತಿಳಿಸಿದ್ದಾರೆ.
ಮೇ, ಜೂನ್‌ನಲ್ಲಿ ರೆಪೋ ದರ ಏರಿಸಿದ್ದ ಆರ್‌ಬಿಐ
ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಮೇ, ಜೂನ್‌ನಲ್ಲಿ ರೆಪೋ ದರವನ್ನು ಏರಿಕೆ ಮಾಡಿದೆ. ಜೂನ್‌ನಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ.
ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು.
ಮೇ 4ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಆರ್‌ಬಿಐ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸುವ ಬಗ್ಗೆ ಘೋಷಿಸಿದ್ದರು. ಈ ಹಿನ್ನೆಲೆಯಿಂದಾಗಿ ಜನರಿಗೆ ಸಾಲದ ಇಎಂಐ ಹೊರೆ ಅಧಿಕವಾಗಿತ್ತು. ಅದಾದ ಬಳಿಕ ಮತ್ತೆ ಜೂನ್ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ.


Click it and Unblock the Notifications