ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ನೇತೃತ್ವದಲ್ಲಿ ಆರು ಮಂದಿಯ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯು ಜೂನ್ 6ರಿಂದ ಜೂನ್ 8ರವರೆಗೆ ನಡೆಯುತ್ತಿದೆ. ಈಗಾಗಲೇ ಎರಡು ದಿನಗಳ ಸಭೆ ನಡೆದಿದ್ದು ಮೂರನೇ ದಿನವಾದ ಇಂದು (ಜೂನ್ 8) ಆರ್‌ಬಿಐ ವಿತ್ತೀಯ ದರದ ಬಗ್ಗೆ ಘೋಷಣೆಯನ್ನು ಮಾಡಲಿದೆ. ಪ್ರಸ್ತುತ ಹೂಡಿಕೆದಾರರ ಚಿತ್ತ ಆರ್‌ಬಿಐ ಸಭೆಯತ್ತ ಇದೆ.
ಇಂದು ಆರ್‌ಬಿಐ ರೆಪೋ ದರದ ಪರಿಷ್ಕರಣೆಯನ್ನು ಮಾಡಲಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಆರ್‌ಬಿಐ ರೆಪೋ ದರವನ್ನು 25 ಮೂಲಾಂಕ ಏರಿಕೆ ಮಾಡಬಹುದು ಎಂದು ಬಹುತೇಕ ತಜ್ಞರುಗಳು ಅಭಿಪ್ರಾಯ ಪಟ್ಟಿದ್ದರು. ಆದರೆ ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಜೂನ್‌ನಲ್ಲಿ ರೆಪೋ ದರ ಸ್ಥಿರವಾಗಿರಿಸುತ್ತಾ ಎಂದು ಕಾದು ನೋಡಬೇಕಾಗಿದೆ.

ರೆಪೋ ದರದ ಬಗ್ಗೆ ತಜ್ಞರ ಅಭಿಪ್ರಾಯವೇನಿದೆ?
" ಪ್ರಸ್ತುತ ರೆಪೋ ದರ ಶೇಕಡ 6.5ರಷ್ಟಿದೆ. ಏಪ್ರಿಲ್‌ನಲ್ಲಿ ಹಣದುಬ್ಬರವು ಶೇಕಡ 5ಕ್ಕಿಂತ ಕೆಳಕ್ಕೆ ಇಳಿದಿದೆ. ಮೇ ತಿಂಗಳಿನಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ರೆಪೋ ದರವನ್ನು ಆರ್‌ಬಿಐ ಸ್ಥಿರವಾಗಿರಿಸುವ ನಿರೀಕ್ಷೆಯಿದೆ," ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ತಿಳಿಸಿದ್ದಾರೆ.
"ಆರ್‌ಬಿಐ ಈಗಾಗಲೇ ರೆಪೋ ದರವನ್ನು ಶೇಕಡ 2.5ರಷ್ಟು ಏರಿಕೆ ಮಾಡಿದೆ. ಇದು ಬ್ಯಾಂಕಿಂಗ್ ವಲಯದ ಮೇಲೆ ಅಧಿಕ ಪ್ರಭಾವ ಉಂಟು ಮಾಡಿದೆ. ಈಗಾಗಲೇ ದರ ಹೆಚ್ಚಾಗಿರುವಾಗ ಮತ್ತೆ ಈ ತಿಂಗಳಲ್ಲಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲ," ಎಂದು ಬ್ಯಾಂಕ್ ಆಫ್ ಬರೋಡಾದ ಮ್ಯಾನೆಜಿಂಗ್ ಡೈರೆಕ್ಟರ್ ರಜನೀಶ್ ಕರ್ನಾಟಕ್ ಅಭಿಪ್ರಾಯಿಸಿದ್ದಾರೆ.
ಇನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯನಿರ್ವಾಹಕ ಅಧಿಕಾರಿ ಆಶೀಶ್ ಪಾಂಡೆ ಕೂಡಾ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡದು. ಜೂನ್ ಸಭೆಯ ಬಳಿಕ ರೆಪೋ ದರವನ್ನು ಆರ್‌ಬಿಐ ಸ್ಥಿರವಾಗಿರಿಸುತ್ತದೆ ಎಂದು ಹೇಳಿದ್ದಾರೆ. ಏಪ್ರಿಲ್‌ನಲ್ಲಿಯೂ ಬಹುತೇಕ ತಜ್ಞರುಗಳು ರೆಪೋ ದರವನ್ನು ಏರಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಆದರೆ ಸ್ಥಿರವಾಗಿರಿಸಲಾಗಿತ್ತು. ಈ ಬಾರಿ ತಜ್ಞರ ಅಭಿಪ್ರಾಯದಂತೆ ಆರ್‌ಬಿಐ ನಿರ್ಧಾರವಿರಲಿದೆ ನೋಡಬೇಕಾಗಿದೆ.
ಹಣದುಬ್ಬರ ದರ ಇಳಿಕೆ
ಹಣದುಬ್ಬರವು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರ ದರವು 18 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಪ್ರಸ್ತುತ ಶೇಕಡ 4.7ರಷ್ಟಿದೆ. ಮೇ ತಿಂಗಳಿನಲ್ಲಿ ಈ ಹಣದುಬ್ಬರ ದರವು ಏಪ್ರಿಲ್ ತಿಂಗಳ ದರಕ್ಕಿಂತ ಕಡಿಮೆ ಇರಲಿದೆ ಎಂದು ಇತ್ತೀಚೆಗೆ ಆರ್‌ಬಿಐ ಗವರ್ನರ್ ಅಭಿಪ್ರಾಯಿಸಿದ್ದಾರೆ. ಮೇ ತಿಂಗಳ ಸಿಪಿಐ ಆಧಾರಿತ ಹಣದುಬ್ಬರ ದರವನ್ನು ಜೂನ್ 12ರಂದು ಬಿಡುಗಡೆ ಮಾಡಲಾಗುತ್ತದೆ.
"ರೆಪೋ ದರವನ್ನು ಸ್ಥಿರವಾಗಿರಿಸುವ ನಿರ್ಧಾರವು ಸರ್ವಾನುಮತದಿಂದ ಬರುವ ಸಾಧ್ಯತೆಯಿದೆ. ಬೆಳೆಗಳ ಮೇಲೆ ಮಾನ್ಸೂನ್ ಪ್ರಭಾವವು ಆಹಾರದ ಬೆಲೆಗಳಲ್ಲಿನ ಏರಿಕೆಗೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಇಂತಹ ಸ್ಥಿತಿಯಲ್ಲಿ ಆರ್‌ಬಿಐನ ನಿರ್ಧಾರವು ಅತೀ ನಿರ್ಣಾಯಕವಾಗಿರುತ್ತದೆ," ಎಂದು ಡಿಬಿಎಸ್‌ನ ಹಿರಿಯ ಅರ್ಥಶಾಸ್ತ್ರಜ್ಞೆ ರಾಧಿಕಾ ರಾವ್ ತಿಳಿಸಿದ್ದಾರೆ.
ಆರ್‌ಬಿಐ ಈ ಹಿಂದೆ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಸುಮಾರು ಹತ್ತು ತಿಂಗಳುಗಳ ಕಾಲ ಸ್ಥಿರವಾಗಿರಿಸಿದ್ದ ರೆಪೋ ದರವನ್ನು ಆರ್‌ಬಿಐ ಮೇ ತಿಂಗಳಿನಲ್ಲಿ 40 ಮೂಲಾಂಕ ಏರಿಕೆ ಮಾಡಿದೆ. ಅದಾದ ಬಳಿಕ ಜೂನ್‌ನಲ್ಲಿ ಮತ್ತೆ 50 ಮೂಲಾಂಕ, ಆಗಸ್ಟ್‌ನಲ್ಲಿ 50 ಮೂಲಾಂಕ, ಸೆಪ್ಟೆಂಬರ್‌ನಲ್ಲಿ ಮತ್ತೆ 50 ಬಿಪಿಎಸ್ ದರ ಏರಿಕೆ ಮಾಡಿದೆ.
ಅದಾದ ಬಳಿಕ ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೋ ದರವನ್ನು 35 ಬಿಪಿಎಸ್ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಿ ಮತ್ತೆ 25 ಬಿಪಿಎಸ್ ಏರಿಸಿದೆ. ಒಟ್ಟಾಗಿ 250 ಮೂಲಾಂಕದವರೆಗೂ ದರ ಏರಿಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ರೆಪೋ ದರ ಸ್ಥಿರವಾಗಿರಿಸಲಾಗಿದೆ. ಜೂನ್‌ನಲ್ಲಿಯೂ ದರ ಸ್ಥಿರವಾಗಿರಿಸುವ ನಿರೀಕ್ಷೆಯಿದೆ.


Click it and Unblock the Notifications