ನಿರಂತರವಾಗಿ ರೆಪೋ ದರವನ್ನು ಏರಿಕೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆರ್‌ಬಿಐ ರೆಪೋ ದರವನ್ನು ಫೆಬ್ರವರಿಯಲ್ಲಿ 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.50ಕ್ಕೆ ತಲುಪಿದೆ. ಈಗ ಆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ಹಿಂದೆ ಒಟ್ಟು 6 ಬಾರಿ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ. 7ನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು 25 ಬಿಪಿಎಸ್ ಏರಿಕೆ ಮಾಡಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದೆ.
ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಐ ಈ ಕ್ರಮವನ್ನು ಕೈಗೊಳ್ಳುತ್ತಿದೆ. 2022ರ ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ 2022ರ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಅದಾದ ಬಳಿಕ ನಿರಂತರವಾಗಿ ದರ ಹೆಚ್ಚಿಸುತ್ತಾ ಬಂದಿದೆ.

ಮೇ ತಿಂಗಳಿನಿಂದ ಈವರೆಗೆ ರೆಪೋ ದರ ಏರಿಕೆ ಟೈಮ್‌ಲೈನ್
* 4, ಮೇ 2022: ಎಂಪಿಸಿಯ ಅನಿಗದಿತ ಸಭೆಯ ಬಳಿಕ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಏಪ್ರಿಲ್‌ವರೆಗೆ ಸತತ 10 ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿತ್ತು. ಈ ಪರಿಷ್ಕರಣೆಯ ಬಳಿಕ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 4.40ಕ್ಕೆ ಏರಿಕೆಯಾಗಿದೆ.
* 8, ಜೂನ್ 2022: ಮೇ ತಿಂಗಳಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್ ರೆಪೋ ದರ ಏರಿಕೆ ಮಾಡಿದ ಬಳಿಕ ಜೂನ್‌ನಲ್ಲಿಯೂ ಮತ್ತೆ ದರ ಹೆಚ್ಚಿಸಿದೆ. ಜೂನ್ ತಿಂಗಳಿನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದ್ದು ದರ ಶೇಕಡ 4.9ಕ್ಕೆ ತಲುಪಿದೆ.
* 5, ಆಗಸ್ಟ್ 2022: ಇದಾದ ಬಳಿಕ ನಂತರ ಆಗಸ್ಟ್‌ನಲ್ಲಿ ಎಂಪಿಸಿ ಸಭೆಯು ನಡೆದಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು 50 ಬಿಪಿಎಸ್ ಹೆಚ್ಚಿಸಿದ್ದು, ದರ ಶೇಕಡ 5.4ಕ್ಕೆ ಏರಿಕೆಯಾಗಿದೆ.
* 30, ಸೆಪ್ಟೆಂಬರ್ 2022: ಸೆಪ್ಟೆಂಬರ್‌ನಲ್ಲಿ ಮತ್ತೆ ರೆಪೋ ದರವನ್ನು ಆರ್‌ಬಿಐ 50 ಬಿಪಿಎಸ್ ಹೆಚ್ಚಿಸಿದ್ದು ದರವು ಶೇಕಡ 5.9ಕ್ಕೆ ತಲುಪಿದೆ.
* 7, ಡಿಸೆಂಬರ್ 2022: ಸತತವಾಗಿ 50 ಮೂಲಾಂಕ ರೆಪೋ ದರ ಏರಿಕೆ ಮಾಡಿದ ಬಳಿಕ ಆರ್‌ಬಿಐ ಡಿಸೆಂಬರ್‌ನಲ್ಲಿ ದರ ಏರಿಕೆ ಕೊಂಚ ಕಡಿಮೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ 35 ಬಿಪಿಎಸ್ ದರ ಹೆಚ್ಚಿಸಿದ್ದು ರೆಪೋ ದರ ಶೇಕಡ 6.25ಕ್ಕೆ ತಲುಪಿದೆ.
* 8, ಫೆಬ್ರವರಿ 2023: ಫೆಬ್ರವರಿಯಲ್ಲಿ ಮತ್ತಷ್ಟು ಕಡಿಮೆ ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಕೇಂದ್ರ ಬ್ಯಾಂಕ್ 25 ಬಿಪಿಎಸ್ ದರ ಹೆಚ್ಚಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ.
* 6, ಏಪ್ರಿಲ್ 2023: ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ಆಗಿದೆ.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಏಪ್ರಿಲ್ 3, 5, 6ರಂದು ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಏಪ್ರಿಲ್ 6ರಂದು ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ.=


Click it and Unblock the Notifications