ಜೂನ್‌ನಲ್ಲಿ ನಡೆದ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿದೆ. ಈಗ ಆಗಸ್ಟ್‌ನಲ್ಲಿಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಮೂರನೇ ಬಾರಿಗೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ವರದಿಯು ಹೇಳುತ್ತದೆ. ಆದರೆ ತಜ್ಞರು ಏನು ಹೇಳುತ್ತಾರೆ?
ಯುಎಸ್ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಬೆಂಚ್‌ಮಾರ್ಕ್ ದರಗಳನ್ನು ಹೆಚ್ಚಿಸಿವೆ. ಆದರೆ ಮುಂಬರುವ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಬಹುದು ಎಂಬುವುದು ಹಲವಾರು ಮಂದಿಯ ನಂಬಿಕೆಯಾಗಿದೆ. ಈ ಹಿಂದೆ ಹಣದುಬ್ಬರ ಕುಸಿದಾಗ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಲಾಗಿದೆ. ಆದರೆ ಹಣದುಬ್ಬರ ಹೆಚ್ಚಾದಾಗ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆರ್‌ಬಿಐ ಈಗಾಗಲೇ ತಿಳಿಸಿದೆ.

ದೇಶದಲ್ಲಿ ಹಣದುಬ್ಬರ ದರವು ಆರ್‌ಬಿಐನ ಸಹಿಷ್ಣುಮಟ್ಟಕ್ಕಿಂತ ಕೆಳಗಿದೆ. ಆದ್ದರಿಂದಾಗಿ ಏಪ್ರಿಲ್ ಮತ್ತು ಜೂನ್‌ನಲ್ಲಿ ನಡೆದ ಕೊನೆಯ ಎರಡು ದ್ವೈಮಾಸಿಕ ನೀತಿ ವಿಮರ್ಶೆಗಳಲ್ಲಿ ಬೆಂಚ್‌ಮಾರ್ಕ್ ದರಗಳನ್ನು ಸ್ಥಿರವಾಗಿರಿಸಿದೆ ಎಂದು ತಜ್ಞರು ಹೇಳಿದ್ದಾರೆ. ಇನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಸಲು ಆರಂಭಿಸಿದೆ. ಅದಾದ ಬಳಿಕ ರೆಪೋ ದರವು ಶೇಕಡ 6.5 ಕ್ಕೆ ತಲುಪಿದೆ.
ಎಂಪಿಸಿ ಸಭೆ ಯಾವಾಗ ನಡೆಯಲಿದೆ?
ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆಯು ಆಗಸ್ಟ್ 8 ರಂದು ಪ್ರಾರಂಭವಾಗುತ್ತದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆಗಸ್ಟ್ 10 ರಂದು ನೀತಿಗಳನ್ನು ಪ್ರಕಟಿಸುತ್ತಾರೆ. ಎಂಪಿಸಿ ಸಭೆಯು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ನೇತೃತ್ವದಲ್ಲಿ ನಡೆಯಲಿದ್ದು, ಸಭೆಯಲ್ಲಿ ಆರು ಸದಸ್ಯರುಗಳು ಇರುತ್ತಾರೆ. ಸಮಿತಿಯು ಪ್ರತಿ ಎರಡರಿಂದ ಮೂರು ತಿಂಗಳಿಗೊಮ್ಮೆ ಸಭೆ ನಡೆಸುತ್ತದೆ. ಆರ್‌ಬಿಐ ಗವರ್ನರ್ ಸಭೆಯ ಮೂರನೇ ದಿನದ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಬದಲಾವಣೆಗಳಿದ್ದರೂ ಅದನ್ನು ಪ್ರಕಟಿಸಲಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್, "ಆರ್‌ಬಿಐ ದರಗಳು ಮತ್ತು ನಿಲುವು ಎರಡರಲ್ಲೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಪ್ರಸ್ತುತ, ಹಣದುಬ್ಬರವು ಶೇಕಡ 5 ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಆದರೆ ಮುಂಬರುವ ತಿಂಗಳುಗಳಲ್ಲಿ ತರಕಾರಿಗಳು ಮತ್ತು ಬೇಳೆಕಾಳುಗಳ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಅದರಿಂದಾಗಿ ರೆಪೋ ದರವನ್ನು ಇಳಿಕೆ ಮಾಡುವ ಯಾವುದೇ ಸೂಚನೆ ಇಲ್ಲ," ಎಂದು ತಿಳಿಸಿದ್ದಾರೆ.
"2000 ರೂಪಾಯಿ ನೋಟು ಚಲಾವಣೆಯಿಂದ ಹಿಂಪಡೆದ ಕಾರಣದಿಂದಾಗಿ ಆರ್‌ಬಿಐ ಹಣಕಾಸು ನೀತಿಯಲ್ಲಿ ಹೆಚ್ಚಿನ ಬದಲಾವಣೆ ತರಬೇಕಾದ ಪರಿಸ್ಥಿತಿಯನ್ನು ಎದುರಿಸುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಉಪಸ್ನಾ ಭಾರದ್ವಾಜ್ ಹೇಳಿದ್ದಾರೆ.
ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ (ICRA) ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಗ್ರಾಹಕರ ಬೆಲೆ ಸೂಚ್ಯಂಕ (CPI), ಅಥವಾ ರಿಟೇಲ್ ಹಣದುಬ್ಬರವು ತಿಂಗಳ ಅಂತ್ಯದ ವೇಳೆಗೆ ಶೇಕಡ 6 ಅನ್ನು ಮೀರುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಿರಂತರವಾಗಿ ರೆಪೋ ದರವನ್ನು ಏರಿಕೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಪ್ರಿಲ್ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಜೂನ್ ತಿಂಗಳಿನಲ್ಲಿಯೂ ರೆಪೋ ದರವನ್ನು ಸ್ಥಿರವಾಗಿರಿಸುವ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿದೆ. ಆರ್‌ಬಿಐ ರೆಪೋ ದರವನ್ನು ಫೆಬ್ರವರಿಯಲ್ಲಿ 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.50ಕ್ಕೆ ತಲುಪಿದೆ. ಈಗ ಆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.


Click it and Unblock the Notifications