ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಇಂದು ಅಂದರೆ ಆಗಸ್ಟ್ 8 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. ಈ ಹಿಂದೆ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದ್ದು ಈ ಎಂಪಿಸಿ ಸಭೆಯ ಬಳಿಕವೂ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸುವ ನಿರೀಕ್ಷೆಯಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ, ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಮೂರು ದಿನಗಳ ಕಾಲ ಸಭೆ ನಡೆಸಲಿದ್ದು, ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಗೆ ಗವರ್ನರ್ ಶಕ್ತಿಕಾಂತ ದಾಸ್ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಆರ್‌ಬಿಐ ರೆಪೋ ದರವನ್ನು ಶೇಕಡ 6.5ರಲ್ಲಿ ಸ್ಥಿರವಾಗಿರಿಸಿದ್ದು ಅದಾದ ಬಳಿಕ ಸ್ಥಿರವಾಗಿಯೇ ಇದೆ.

ಆರ್‌ಬಿಐ ಮಾನೆಟರಿ ಪಾಲಿಸಿ ಸಮಯ, ದಿನಾಂಕ
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ನಿರ್ಧಾರವನ್ನು ಆಗಸ್ಟ್ 10 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರಕಟಿಸಲಿದ್ದು, ಇದರ ಪತ್ರಿಕಾಗೋಷ್ಠಿಯನ್ನು ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡಲಾಗುತ್ತದೆ. ಆರ್‌ಬಿಐನ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಬಿಐ ಹಣಕಾಸು ನೀತಿ ಪ್ರಕಟಣೆಯ ನೇರ ಪ್ರಸಾರವನ್ನು ನೀವು ವೀಕ್ಷಿಸಬಹುದು.
ಆರ್‌ಬಿಐನಿಂದ ಏನು ನಿರೀಕ್ಷೆಯಿದೆ?
"ಮುಂಬರುವ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಎಚ್ಚರಿಕೆಯ ಮತ್ತು ನಿಷ್ಠುರ ನಿಲುವುಗಳನ್ನು ಕಾಯ್ದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆಹಾರದ ಬೆಲೆಗಳಲ್ಲಿ, ನಿರ್ದಿಷ್ಟವಾಗಿ ಜುಲೈ ತಿಂಗಳಿನಲ್ಲಿ ತರಕಾರಿಗಳ ದರ ಹೆಚ್ಚಳವಾಗಿದ್ದು, ಹಣದುಬ್ಬರವು ಜಿಗಿತ ಕಂಡಿದೆ. ಜೂನ್‌ನಲ್ಲಿ, ಗ್ರಾಹಕ ಬೆಲೆ ಸೂಚ್ಯಂಕ (CPI) ಶೇಕಡ 4.81 ರಷ್ಟು ಹಣದುಬ್ಬರ ದರವನ್ನು ತೋರಿಸಿದೆ," ಎಂದು ಎಯುಎಂ ಕ್ಯಾಪಿಟಲ್‌ನ ನ್ಯಾಷನಲ್ ಹೆಡ್ ವೆಲ್ತ್ ಮಹೇಶ್ ಅಗರ್ವಾಲ್ ತಿಳಿಸಿದ್ದಾರೆ.
"ಜೂನ್ ತಿಂಗಳಿನಲ್ಲಿ ಮೇ ತಿಂಗಳಿಗಿಂತ ಕಡಿಮೆಯಾಗಿದೆ. ಆದರೆ ಮುಂಗಾರು ಮಳೆಯ ಪರಿಣಾಮಗಳು ರೈತರ ಮೇಲೆ ಬೀರಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆಯಿದೆ. ಹಲವಾರು ಪ್ರದೇಶಗಳಲ್ಲಿ ಕೊಯ್ಲು ನಿಧಾನವಾಗಿದೆ. ಸಿರಿಧಾನ್ಯಗಳ ಮಾರುಕಟ್ಟೆ ಬೆಲೆಯು ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಏರುತ್ತಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಆರ್‌ಬಿಐ ಮುಂದಿನ ದಿನಗಳಲ್ಲಿ ದಿಢೀರನೇ ರೆಪೋ ದರ ಹೆಚ್ಚಿಸುವ ನಿರೀಕ್ಷೆಯಿದೆ. ಆದರೆ ಈ ಬಾರಿ ಸ್ಥಿರವಾಗಿರಿಸುವ ಸಾಧ್ಯತೆಯಿದೆ," ಎಂದು ಹೇಳಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಮಾತನಾಡಿ, "ಈ ಬಾರಿ ಎಂಪಿಸಿಯು ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ನಮಗಿದೆ. ಜೂನ್‌ನಲ್ಲಿ ಹಣದುಬ್ಬರವು ಶೇಕಡ 5ಕ್ಕಿಂತ ಕಡಿಮೆಯಿದ್ದರೆ, ಜುಲೈನಲ್ಲಿ ಶೇಕಡ 6ಕ್ಕೆ ಹತ್ತಿರ ಬರುವ ನಿರೀಕ್ಷೆಯಿದೆ. ಆದರೆ ತರಕಾರಿಗಳು ಮತ್ತು ಬೇಳೆಕಾಳುಗಳ ಬೆಲೆಗಳು ಆಹಾರ ಹಣದುಬ್ಬರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಲೇ ಇರುತ್ತವೆ," ಎಂದು ತಿಳಿಸಿದ್ದಾರೆ.


Click it and Unblock the Notifications