ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ದರವನ್ನು 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.50ಕ್ಕೆ ತಲುಪಿದೆ. ಈ ಹಿಂದೆ 5 ಬಾರಿ ಆರ್‌ಬಿಐ ರೆಪೋ ದರ ಆರ್‌ಬಿಐ ಹೆಚ್ಚಿಸಿದೆ.
ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಐ ಈ ಕ್ರಮವನ್ನು ಕೈಗೊಳ್ಳುತ್ತಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು.
ಆ ಬಳಿಕ ಆರ್‌ಬಿಐ ಜೂನ್ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ.

ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಫೆಬ್ರವರಿ 6ರಿಂದ 8ರವರೆಗೆ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಫೆಬ್ರವರಿ 8ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ.
ತಜ್ಞರ ಅಭಿಪ್ರಾಯ ಏನಿತ್ತು?
ಅಕ್ಟೋಬರ್ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹಣದುಬ್ಬರವು ಶೇಕಡ 7.41ರಿಂದ ಶೇಕಡ 6.77ಕ್ಕೆ ಇಳಿಕೆಯಾಗಿದೆ. ಹಾಗೆಯೇ ಅದಾದ ಬಳಿಕ ಹಣದುಬ್ಬರ ಇಳಿಯುತ್ತಲೇ ಇದೆ. ಡಿಸೆಂಬರ್‌ನಲ್ಲಿ ಡಬ್ಲ್ಯೂಪಿಐ ಹಣದುಬ್ಬರ (ಸಗಟು ಹಣದುಬ್ಬರ) ಶೇಕಡ 4.95ಕ್ಕೆ ಇಳಿಕೆಯಾಗಿದೆ. ನವೆಂಬರ್‌ನಲ್ಲಿ ಶೇಕಡ 5.85 ಆಗಿತ್ತು. ಇನ್ನು ರಿಟೇಲ್ ಹಣದುಬ್ಬರವು ಶೇಕಡ 5.72ಕ್ಕೆ ಕುಸಿತವಾಗಿದೆ. ಈ ಎಲ್ಲ ಬೆಳವಣಿಗೆಯನ್ನು ನೋಡಿ, ಕೆಲವು ತಜ್ಞರು ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ ಎಂದು ಹೇಳಿದರೆ, ಕೆಲವು ತಜ್ಞರು ರೆಪೋ ದರವನ್ನು 25 ಮೂಲಾಂಕ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದರು.


Click it and Unblock the Notifications