ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮೂರು ದಿನಗಳ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯು ಸೋಮವಾರ ಆರಂಭವಾಗಿದೆ. ಏಪ್ರಿಲ್ 3ರಿಂದ ಏಪ್ರಿಲ್ 6ರವರೆಗೆ ಸಭೆ ಇರಲಿದೆ. ನಡುವೆ ಏಪ್ರಿಲ್ 4ರಂದು ಮಹಾವೀರ ಜಯಂತಿ ಹಿನ್ನೆಲೆ ಸಭೆ ನಡೆಯುವುದಿಲ್ಲ. 2022ರ ಮೇ ತಿಂಗಳಿನಿಂದ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುತ್ತಾ ಬಂದಿದೆ. ಮುಖ್ಯವಾಗಿ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತನ್ನ ಪ್ರತಿ ದ್ವಿಮಾಸಿಕ ಸಭೆಯ ಬಳಿಕ ಆರ್‌ಬಿಐ ರೆಪೋ ದರ ಹೆಚ್ಚಿಸಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ದರ ಹೆಚ್ಚಿಸಲಾಗಿದ್ದು, ಈಗ ಮತ್ತೆ ಏರಿಸುವ ನಿರೀಕ್ಷೆಯಿದೆ.
ಏಪ್ರಿಲ್ 3ರಿಂದ 6ರವರೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಎಂಪಿಸಿ ಸಭೆಯು ನಡೆಯಲಿದೆ. 2023-24ನೇ ಹಣಕಾಸು ವರ್ಷದ ಮೊದಲ ಸಭೆ ಇದಾದ ಕಾರಣ ಹಲವಾರು ನಿರೀಕ್ಷೆಗಳು ಇದೆ. ಆರು ಜನರ ತಂಡದ ಸಭೆಯು ನಡೆದ ಬಳಿಕ ಗುರುವಾರ ರೆಪೋ ದರ ಬದಲಾವಣೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೇ ತಿಂಗಳಿನಿಂದ ಆರ್‌ಬಿಐ ವಿತ್ತೀಯ ದರ ಏರಿಕೆ ಮಾಡುತ್ತಿದ್ದು ಒಟ್ಟು 250 ಬಿಪಿಎಸ್ ಹೆಚ್ಚಿಸಲಾಗಿದೆ. ಆರ್‌ಬಿಐನ ಹಣದುಬ್ಬರ ಸಹಿಷ್ಣು ಮಟ್ಟಕ್ಕೆ ತಲುಪುವವರೆಗೂ ಈ ಕ್ರಮ ಮುಂದುವರಿಯುವ ಸಾಧ್ಯತೆಯಿದೆ. ಇತ್ತೀಚೆಗೆ ಯುಎಸ್ ಫೆಡರಲ್ ರಿಸರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ದರವನ್ನು ಏರಿಸಿದೆ.

ಮೇ ತಿಂಗಳಿನಿಂದ ಈವರೆಗೆ ರೆಪೋ ದರ ಏರಿಕೆ ಟೈಮ್‌ಲೈನ್
* 4, ಮೇ 2022: ಎಂಪಿಸಿಯ ಅನಿಗದಿತ ಸಭೆಯ ಬಳಿಕ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಏಪ್ರಿಲ್‌ವರೆಗೆ ಸತತ 10 ಬಾರಿ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿತ್ತು. ಈ ಪರಿಷ್ಕರಣೆಯ ಬಳಿಕ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 4.40ಕ್ಕೆ ಏರಿಕೆಯಾಗಿದೆ.
* 8, ಜೂನ್ 2022: ಮೇ ತಿಂಗಳಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್ ರೆಪೋ ದರ ಏರಿಕೆ ಮಾಡಿದ ಬಳಿಕ ಜೂನ್‌ನಲ್ಲಿಯೂ ಮತ್ತೆ ದರ ಹೆಚ್ಚಿಸಿದೆ. ಜೂನ್ ತಿಂಗಳಿನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದ್ದು ದರ ಶೇಕಡ 4.9ಕ್ಕೆ ತಲುಪಿದೆ.
* 5, ಆಗಸ್ಟ್ 2022: ಇದಾದ ಬಳಿಕ ನಂತರ ಆಗಸ್ಟ್‌ನಲ್ಲಿ ಎಂಪಿಸಿ ಸಭೆಯು ನಡೆದಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು 50 ಬಿಪಿಎಸ್ ಹೆಚ್ಚಿಸಿದ್ದು, ದರ ಶೇಕಡ 5.4ಕ್ಕೆ ಏರಿಕೆಯಾಗಿದೆ.
* 30, ಸೆಪ್ಟೆಂಬರ್ 2022: ಸೆಪ್ಟೆಂಬರ್‌ನಲ್ಲಿ ಮತ್ತೆ ರೆಪೋ ದರವನ್ನು ಆರ್‌ಬಿಐ 50 ಬಿಪಿಎಸ್ ಹೆಚ್ಚಿಸಿದ್ದು ದರವು ಶೇಕಡ 5.9ಕ್ಕೆ ತಲುಪಿದೆ.
* 7, ಡಿಸೆಂಬರ್ 2022: ಸತತವಾಗಿ 50 ಮೂಲಾಂಕ ರೆಪೋ ದರ ಏರಿಕೆ ಮಾಡಿದ ಬಳಿಕ ಆರ್‌ಬಿಐ ಡಿಸೆಂಬರ್‌ನಲ್ಲಿ ದರ ಏರಿಕೆ ಕೊಂಚ ಕಡಿಮೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ಆರ್‌ಬಿಐ 35 ಬಿಪಿಎಸ್ ದರ ಹೆಚ್ಚಿಸಿದ್ದು ರೆಪೋ ದರ ಶೇಕಡ 6.25ಕ್ಕೆ ತಲುಪಿದೆ.
* 8, ಫೆಬ್ರವರಿ 2023: ಫೆಬ್ರವರಿಯಲ್ಲಿ ಮತ್ತಷ್ಟು ಕಡಿಮೆ ದರ ಏರಿಕೆಯನ್ನು ಆರ್‌ಬಿಐ ಮಾಡಿದೆ. ಕೇಂದ್ರ ಬ್ಯಾಂಕ್ 25 ಬಿಪಿಎಸ್ ದರ ಹೆಚ್ಚಿಸಿದ್ದು, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ.
ಏಪ್ರಿಲ್‌ನ ಸಭೆಯ ನಿರೀಕ್ಷೆಗಳೇನು?
ಏಪ್ರಿಲ್‌ನಲ್ಲಿ ನಡೆಯುತ್ತಿರುವ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ಮತ್ತೆ 25 ಬಿಪಿಎಸ್ ದರ ಏರಿಕೆ ಮಾಡುವ ಸಾಧ್ಯತೆಯಿದೆ. ಹಾಗೆಯೇ ಮೇ ತಿಂಗಳ ಬಳಿಕ ಮಾಡುತ್ತಾ ಬಂದಿರುವ ರೆಪೋ ದರ ಏರಿಕೆಯಲ್ಲಿ ಏಪ್ರಿಲ್‌ನಲ್ಲಿ ಮಾಡಲಾಗುವ ಏರಿಕೆ ಕೊನೆಯದಾಗಬಹುದು. ಅಂದರೆ ಇದಾದ ಬಳಿಕ ನಂತರ ಎಂಪಿಸಿ ಹಲವಾರು ಸಮಯದವರೆಗೆ ರೆಪೋ ದರ ಏರಿಕೆ ಮಾಡದಿರಬಹುದು ಎಂದು ತಜ್ಞರ ಅನಿಸಿಕೆ. ಪ್ರಮುಖವಾಗಿ ಹಣದುಬ್ಬರ ದರವು ಎಲ್ಲ ಕ್ರಮದ ಮೇಲೆ ಪ್ರಭಾವ ಬೀರಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೋಟಕ್ ಚೆರಿ ಸಿಇಒ ಶ್ರೀಕಾಂತ್ ಸುಬ್ರಮಣಿಯನ್, "ಹಣಕಾಸು ವರ್ಷ 2023 ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳಿಗೆ ಅತೀ ಹೆಚ್ಚು ಕಾರ್ಯವಿದ್ದ ವರ್ಷವಾಗಿದೆ. ಒಂದೆಡೆ ಹಣದುಬ್ಬರ ನಿಯಂತ್ರಣ ಮಾಡಲು ಬಡ್ಡಿದರ ಏರಿಕೆ ಮಾಡುತ್ತಿದ್ದರೆ, ಇನ್ನೊಂದೆಡೆ ಬ್ಯಾಂಕಿಂಗ್ ವಲಯವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿ ಬಂದಿದೆ. ಕೇಂದ್ರ ಬ್ಯಾಂಕ್ ಎಲ್ಲ ಬೆಳವಣಿಗೆ ನೋಡಿಕೊಂಡು ಏಪ್ರಿಲ್‌ನಲ್ಲಿ 25 ಮೂಲಾಂಕ ದರ ಏರಿಕೆ ಮಾಡಲಿದೆ. ಅದಾದ ಬಳಿಕ ದರ ಏರಿಕೆ ಮಾಡದು," ಎಂದು ತಿಳಿಸಿದ್ದಾರೆ. ಇನ್ನು ಎಸ್‌ಬಿಎಂ ಬ್ಯಾಂಕ್ ಇಂಡಿಯಾದ ಟ್ರೆಜರಿ ಮುಖ್ಯಸ್ಥ ಮಂದರ್ ಪಿತಾಳೆ ಕೂಡಾ ಆರ್‌ಬಿಐ 25 ಮೂಲಾಂಕ ದರ ಏರಿಕೆ ಮಾಡುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications