53,125 ಕೋಟಿ ರುಪಾಯಿ ಹಕ್ಕಿನ ಷೇರು ವಿತರಣೆಗೆ (Rights issue) ಮುಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಮೇ 14ನೇ ತಾರೀಕು ರೆಕಾರ್ಡ್ ದಿನಾಂಕ ಎಂದು ನಿಗದಿ ಮಾಡಿದೆ. ಯಾವ ಷೇರುದಾರರು ರೈಟ್ಸ್ ಇಶ್ಯೂಗೆ ಅಪ್ಲೈ ಮಾಡಬಹುದು ಎಂಬುದನ್ನು ಈ ದಿನದಂದು ಎಷ್ಟು ಷೇರು ಅವರ ಬಳಿ ಇರುತ್ತದೆ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ.
ಏಪ್ರಿಲ್ 30ನೇ ತಾರೀಕಿನಂದು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ 53,125 ಕೋಟಿ ರುಪಾಯಿಯನ್ನು 1:15 ಪ್ರಮಾಣದಲ್ಲಿ ಹಕ್ಕಿನ ಷೇರು ವಿತರಿಸುವುದಾಗಿ ಘೋಷಣೆ ಮಾಡಿತ್ತು. ಯಾರ ಬಳಿ 15 ಷೇರು ಇರುತ್ತದೋ ಅಂಥವರು ಅರ್ಜಿ ಹಾಕಿಕೊಂಡರೆ 1 ಹಕ್ಕಿನ ಷೇರನ್ನು 1257 ರುಪಾಯಿಗೆ, ಏಪ್ರಿಲ್ 30ನೇ ತಾರೀಕಿನ ದಿನಾಂತ್ಯದ ದರಕ್ಕೆ 14 ಪರ್ಸೆಂಟ್ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎನ್ನಲಾಗಿತ್ತು.
ಮೂರು ದಶಕದಲ್ಲಿ ಇದೇ ಮೊದಲ ಬಾರಿಗೆ ರಿಲಯನ್ಸ್ ಇಂಥ Rights issueಗೆ ಮುಂದಾಗಿದೆ. ಇನ್ನು ಕಳೆದ ಶುಕ್ರವಾರದಂದು ಷೇರು ಮಾರ್ಕೆಟ್ ವಹಿವಾಟಿನ ದಿನಾಂತ್ಯಕ್ಕೆ ರು. 1561.80 ವ್ಯವಹಾರ ಚುಕ್ತಾ ಮಾಡಿದೆ. Rights issueನಲ್ಲಿ ಎಷ್ಟು ಷೇರಿಗೆ ಅರ್ಜಿ ಹಾಕಿಕೊಳ್ಳುವುದಕ್ಕೆ ಷೇರುದಾರರು ಅರ್ಹರು ಎಂಬುದನ್ನು ನಿರ್ಧರಿಸುವುದಕ್ಕೆ ಮೇ 14 ರೆಕಾರ್ಡ್ ದಿನಾಂಕ ಆಗಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಹಕ್ಕಿನ ಷೇರಿನ ಆರಂಭ ಮತ್ತು ಕೊನೆ ದಿನದ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ. ಸಾಮಾನ್ಯವಾಗಿ ನಗದು ಕೊರತೆ ಇರುವ ಕಂಪೆನಿಗಳು ರೈಟ್ಸ್ ಇಶ್ಯೂ ಮೂಲಕ ಹಣ ಸಂಗ್ರಹ ಮಾಡುತ್ತವೆ.
ಕೊನೆಯ ಬಾರಿಗೆ 1991ರಲ್ಲಿ ರಿಲಯನ್ಸ್ ನಿಂದ ಸಾರ್ವಜನಿಕರ ಮೂಲಕ ಕನ್ವರ್ಟಬಲ್ ಡಿಬೆಂಚರ್ಸ್ ವಿತರಿಸಿ, ಹಣ ಸಂಗ್ರಹಿಸಿತ್ತು. ಆ ನಂತರ ಡಿಬೆಂಚರ್ಸ್ ಅನ್ನು ಪ್ರತಿ ಈಕ್ವಿಟಿ ಷೇರಿಗೆ ತಲಾ 55 ರುಪಾಯಿಯಂತೆ ಪರಿವರ್ತನೆ ಮಾಡಿತ್ತು.


Click it and Unblock the Notifications