ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ಪ್ರತಿ ದಿನವೂ ಸುದ್ದಿಯಲ್ಲಿ ಬರುತ್ತಿದೆ. ಈಗಿನದೇ ನೋಡಿ, ಈ ವರ್ಷದ ಶುರುವಿನಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲ ಲಿಸ್ಟೆಡ್ ಕಂಪೆನಿಗಳನ್ನು ಒಟ್ಟು ಮಾಡಿದರೆ ಅದರ ಗಾತ್ರದ ಅರ್ಧದಷ್ಟಿತ್ತು ರಿಲಯನ್ಸ್. ಈಗ ಆ ಎಲ್ಲ ಕಂಪೆನಿಗಳ ಒಟ್ಟು ಮಾರ್ಕೆಟ್ ಮೌಲ್ಯವನ್ನು ಒಟ್ಟು ಮಾಡಿದರೆ ಸೃಷ್ಟಿಯಾಗುವ ಮೊತ್ತವನ್ನು ರಿಲಯನ್ಸ್ ದಾಟಿದೆ.
ದೇಶದ ಅತ್ಯಂತ ಮೌಲ್ಯಯುತ ಕಂಪೆನಿ ರಿಲಯನ್ಸ್ ಷೇರಿನ ಮೌಲ್ಯ ಈ ವರ್ಷ 54.6% ಹೆಚ್ಚಳವಾಗಿದೆ. ಒಟ್ಟು 83 ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 15.16 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಇತ್ತ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಮಾರ್ಕೆಟ್ ಮೌಲ್ಯ 15.30 ಲಕ್ಷ ಕೋಟಿ ಇದೆ.
ಪಿಎಸ್ ಯುಗಳ ಒಟ್ಟು ಮೌಲ್ಯ 19.3 ಲಕ್ಷ ಕೋಟಿ ಇತ್ತು
ಈ ವರ್ಷದ ಶುರುವಿನಲ್ಲಿ ಪಿಎಸ್ ಯುಗಳ (ಮಿಡ್ ಕ್ಯಾಪ್) ಒಟ್ಟು ಮೌಲ್ಯ 19.3 ಲಕ್ಷ ಕೋಟಿ ಇತ್ತು. ಆಗ ರಿಲಯನ್ಸ್ ಇಂಡಸ್ಟ್ರೀಸ್ 9.6 ಲಕ್ಷ ಕೋಟಿ ಇತ್ತು. ಕಳೆದ ಆರು ತಿಂಗಳಲ್ಲಿ 3300 ಕೋಟಿ USD ಬಂಡವಾಳ ಸಂಗ್ರಹಿಸಿದೆ ರಿಲಯನ್ಸ್. ಇದೇ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ದುಪ್ಪಟ್ಟಾಗಿದೆ. ಹಾಗೆ ನೋಡಿದರೆ ನಿಫ್ಟಿ 50 ಸೂಚ್ಯಂಕ ಕಂಡಿರುವುದು 15% ಹೆಚ್ಚಳ ಮಾತ್ರ.
ವಿಶ್ವದ ಹತ್ತನೇ ಅತಿ ದೊಡ್ಡ ಈಕ್ವಿಟಿ ಮಾರ್ಕೆಟ್
ಮಂಗಳವಾರದ ದಿನದ ಕೊನೆಗೆ ರಿಲಯನ್ಸ್ ಮಾರುಕಟ್ಟೆ ಮೌಲ್ಯ 207.88 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಭಾರತವು ವಿಶ್ವದ ಹತ್ತನೇ ಅತಿ ದೊಡ್ಡ ಈಕ್ವಿಟಿ ಮಾರ್ಕೆಟ್. ಮಾರುಕಟ್ಟೆ ಮೌಲ್ಯ 2.11 ಲಕ್ಷ ಕೋಟಿ ಅಮೆರಿಕನ್ ಡಾಲರ್ ಇದೆ. ಸದ್ಯಕ್ಕೆ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಎರಡನೇ ಸ್ಥಾನದಲ್ಲಿ ಇರುವ ಟಿಸಿಎಸ್ ಮೌಲ್ಯ 9.35 ಲಕ್ಷ ಕೋಟಿ ರುಪಾಯಿ.
ವಿಶ್ವದ ಆರನೇ ಶ್ರೀಮಂತ ಮುಕೇಶ್ ಅಂಬಾನಿ
ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿರುವುದರಿಂದ ಪ್ರವರ್ತಕ ಮುಕೇಶ್ ಅಂಬಾನಿ ನಿವ್ವಳ ಆಸ್ತಿ 88.4 ಬಿಲಿಯನ್ ಅಮೆರಿಕನ್ ಡಾಲರ್ ಆಗುವಂತೆ ಮಾಡಿದೆ. ಅವರೀಗ ವಿಶ್ವದ ಆರನೇ ಶ್ರೀಮಂತ. 2020ರ ಜೂನ್ ಕೊನೆಗೆ ರಿಲಯನ್ಸ್ ಗ್ರೂಪ್ ಪ್ರವರ್ತಕರ ಬಳಿ ಕಂಪೆನಿಯ 50.37% ಷೇರಿದೆ.
ಮೂರು ವರ್ಷದ ಈಚೆಗೆ ಮತ್ತೆ ಏರಿಕೆ
2007ರಲ್ಲಿ ರಿಲಯನ್ಸ್ ಬಂಡವಾಳವು 50 ಬಿಲಿಯನ್ ಯುಎಸ್ ಡಿಯಿಂದ 100 ಬಿಲಿಯನ್ ಗೆ ಕೇವಲ ಆರು ತಿಂಗಳಲ್ಲಿ ತಲುಪಿತು. ಆ ನಂತರ ಷೇರು ಹೇಳಿಕೊಳ್ಳುವಂಥ ಬೆಲೆ ಏರಿಕೆ ಕಾಣಲಿಲ್ಲ. ಮೂರು ವರ್ಷಗಳ ಹಿಂದೆ ಮತ್ತೆ ಮೇಲ್ಮುಖ ಏರಿಕೆಯನ್ನು ಆರಂಭಿಸಿತು ರಿಲಯನ್ಸ್.


Click it and Unblock the Notifications