ಭಾರತದ ಅತಿ ದೊಡ್ಡ (ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕಾಚಾರದಲ್ಲಿ) Rights issue (ಹಕ್ಕಿನ ಷೇರು ವಿತರಣೆ) ರಿಲಯನ್ಸ್ ನಿಂದ 2020ರ ಮೇ 20ನೇ ತಾರೀಕು ಶುರುವಾಗಲಿದೆ. ರಿಲಯನ್ಸ್ ಈಗಾಗಲೇ ಷೇರುದಾರರಿಗೆ ಮಾಹಿತಿ ನೀಡಿರುವಂತೆ, 53,036.13 ಕೋಟಿ ರುಪಾಯಿಯನ್ನು ಸಂಗ್ರಹಿಸಲು ಮುಂದಾಗಿದೆ. ಅದರಲ್ಲಿ 39,775.08 ಕೋಟಿಯನ್ನು ಕಂಪೆನಿಯ ಸಾಲ ತೀರಿಸಲು ಬಳಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ.
ಇನ್ನು ಕಂಪೆನಿಯ ಎಲ್ಲ ಸಾಲವನ್ನು ತೀರಿಸುವ ನಿಟ್ಟಿನಲ್ಲಿ ಈಗಾಗಲೇ ನಾಲ್ಕು ವ್ಯವಹಾರವನ್ನು ಒಂದು ತಿಂಗಳ ಅವಧಿಯಲ್ಲಿ ಮಾಡಿ ಮುಗಿಸಿದೆ. ಈಚೆಗೆ ಜನರಲ್ ಅಟ್ಲಾಂಟಿಕ್, ವೆಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಸಿಲ್ವರ್ ಲೇಕ್ ಮತ್ತು ಫೇಸ್ ಬುಕ್ ಜತೆಗೆ ವ್ಯವಹಾರವನ್ನು ಘೋಷಿಸಿದೆ. ಈ ಹಿಂದೆ 7 ಸಾವಿರ ಕೋಟಿ ರುಪಾಯಿಯ ಪಾಲನ್ನು ಬ್ರಿಟಿಷ್ ಪೆಟ್ರೋಲಿಯಂಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಒಟ್ಟಾರೆ ಇವೆಲ್ಲದರಿಂದ 74 ಸಾವಿರ ಕೋಟಿ ರುಪಾಯಿ ನಗದು ಬಂದಂತಾಗುತ್ತದೆ.
ಅಂದ ಹಾಗೆ, ರಿಲಯನ್ಸ್ ಇಂಡಸ್ಟ್ರೀಸ್ ಗೆ ಮಾರ್ಚ್ 31, 2020ಕ್ಕೆ ನಿವ್ವಳ ಸಾಲ 1.61 ಲಕ್ಷ ಕೋಟಿ ರುಪಾಯಿ ಇದೆ. ಈ ಮೊತ್ತವು 2021ರ ಮೊತ್ತವು ಮಾರ್ಚ್ ನಲ್ಲಿ ಸಂಪೂರ್ಣ ಸಾಲಮುಕ್ತ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಹಕ್ಕಿನ ಷೇರು ವಿತರಣೆಯಲ್ಲಿ ಅರ್ಜಿ ಹಾಕಲು ಬಯಸುವವರಿಗಾಗಿ ತಿಳಿದುಕೊಳ್ಳಬೇಕಾದ ಮಾಹಿತಿಗಳು ಇಲ್ಲಿವೆ.

* ಮೇ 20ನೇ ತಾರೀಕಿನಿಂದ ಆರಂಭವಾಗುವ ಹಕ್ಕಿನ ಷೇರಿನ ವಿತರಣೆ ಜೂನ್ 3, 2020ಕ್ಕೆ ಕೊನೆಯಾಗುತ್ತದೆ.
* ಹಕ್ಕಿನ ಷೇರಿಗೆ ಅರ್ಹರಾದವರಿಗೆ ಈಗಾಗಲೇ ರಿಲಯನ್ಸ್ ನಿಂದ ಮೇಲ್ ಕಳುಹಿಸಲಾಗಿದೆ. rights issue ಅರ್ಜಿ ಮತ್ತಿತರ ಕಾಗದ ಕಳುಹಿಸಲಾಗಿದೆ.
* 10 ರುಪಾಯಿ ಮುಖಬೆಲೆಯ 42,26,26,894 ಷೇರುಗಳನ್ನು ತಲಾ 1257 ರುಪಾಯಿಯಂತೆ ವಿತರಣೆ ಮಾಡಲಾಗುತ್ತದೆ. ಅಂದರೆ 1247 ರುಪಾಯಿ ಪ್ರೀಮಿಯಂ ನಿಗದಿ ಮಾಡಲಾಗಿದೆ.
* ಹಕ್ಕಿನ ಷೇರಿನ ಬಗ್ಗೆ ವಿತರಣೆ ಮಾಡಿದ ಏಪ್ರಿಲ್ 30ನೇ ತಾರೀಕಿನ ಷೇರು ಮಾರ್ಕೆಟ್ ದಿನಾಂತ್ಯದ ವಹಿವಾಟಿನ ಮೊತ್ತದ ಆಧಾರದಲ್ಲಿ ಹೇಳುವುದಾದರೆ, 1257 ರುಪಾಯಿಗೆ, ಅಂದರೆ 14 ಪರ್ಸೆಂಟ್ ರಿಯಾಯಿತಿ ದೊರೆತಂತೆ ಆಗುತ್ತದೆ.
* ಮೇ 14ನೇ ತಾರೀಕಿಗೆ ಅನ್ವಯ ಆಗುವಂತೆ ಷೇರುದಾರರು ಹೊಂದಿರುವ ಪ್ರತಿ ಹದಿನೈದು ಷೇರಿಗೆ ಒಂದು ಷೇರು ದೊರೆಯುತ್ತದೆ.
* ಷೇರು ಖರೀದಿಗೆ ಮೊದಲಿಗೆ 25 ಪರ್ಸೆಂಟ್ ಆರಂಭದಲ್ಲಿ ಪಾವತಿಸಬೇಕು. ಅಂದರೆ 314.25 ರುಪಾಯಿ ನೀಡಬೇಕು. ಬಾಕಿ ಮೊತ್ತದಲ್ಲಿ ಮೇ 2021ಕ್ಕೆ 314.25 ರುಪಾಯಿ ಹಾಗೂ ನವೆಂಬರ್ 2021ಕ್ಕೆ 628.50 ರುಪಾಯಿ ಪಾವತಿ ಮಾಡಬೇಕು.


Click it and Unblock the Notifications