ರಿಲಯನ್ಸ್ ಇಂಡಸ್ಟ್ರೀಸ್‌ನ ಎರಡನೇ ತ್ರೈಮಾಸಿಕದ (2023ರ ಜುಲೈನಿಂದ ಸೆಪ್ಟೆಂಬರ್) ಒಟ್ಟಾರೆ ನಿವ್ವಳ ಲಾಭ 19,878 ಕೋಟಿ ರೂಪಾಯಿ ಎಂದು ಸಂಸ್ಥೆಯು ಶುಕ್ರವಾರದಂದು ಎರಡನೇ ತ್ರೈಮಾಸಿಕದ ವರದಿಯಲ್ಲಿ ತಿಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ಲಾಭದ ಪ್ರಮಾಣವನ್ನು ಗಮನಿಸಿದರೆ ಶೇಕಡ 29.7ರಷ್ಟು ಹೆಚ್ಚಳ ಆಗಿದೆ.
ಆದರೆ ಕಂಪನಿಯ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ಆದಾಯದಲ್ಲಿ ಗಣನೀಯ ಇಳಿಕೆ ಆಗಿದೆ. ರಿಲಯನ್ಸ್ ರೀಟೇಲ್ ನಿವ್ವಳ ಲಾಭದಲ್ಲಿ ಶೇಕಡ 21ರಷ್ಟು ಹೆಚ್ಚಳವಾಗಿದ್ದು, 2790 ಕೋಟಿ ರೂಪಾಯಿ ತಲುಪಿದೆ. ಒಟ್ಟಾರೆ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 18.8ರಷ್ಟು ಹೆಚ್ಚಳವಾಗಿ 77,148 ಕೋಟಿ ರೂಪಾಯಿಗೆ ತಲುಪಿದೆ.

ಆಫ್ ಲೈನ್ ಹಾಗೂ ಆನ್ ಲೈನ್ ವ್ಯವಹಾರದ ವಿಸ್ತರಣೆಯನ್ನು ಮುಂದುವರಿಸಲಾಗಿದೆ ಎಂದು ರಿಲಯನ್ಸ್ ನಿಂದ ತಿಳಿಸಲಾಗಿದೆ. ಕಾರ್ಯಾಚರಣೆ ಮೂಲಕವಾಗಿ ರಿಲಯನ್ಸ್‌ಗೆ ಬಂದ ಒಟ್ಟಾರೆ ಆದಾಯವು 2.34 ಲಕ್ಷ ಕೋಟಿ ರೂಪಾಯಿಯಷ್ಟಿದೆ.
ರಿಲಯನ್ಸ್ ಜಿಯೋ ನಿವ್ವಳ ಲಾಭ ಏರಿಕೆ
ರಿಲಯನ್ಸ್ ಜಿಯೋದ ಎರಡನೇ ತ್ರೈಮಾಸಿಕ (2023ರ ಜುಲೈನಿಂದ ಸೆಪ್ಟೆಂಬರ್) ಫಲಿತಾಂಶ ಪ್ರಕಟ ಆಗಿದ್ದು, ಕಳೆದ ತ್ರೈಮಾಸಿಕದಿಂದ ಈ ತ್ರೈಮಾಸಿಕಕ್ಕೆ ನಿವ್ವಳ ಲಾಭವು ಶೇಕಡ 4ರಷ್ಟು ಜಿಗಿದು, 5058 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಜಿಯೋದ ಆದಾಯವು ಶೇಕಡ ಮೂರರಷ್ಟು ಮೇಲೇರಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಜಿಯೋದ ಲಾಭ 4,863 ಕೋಟಿ ರೂಪಾಯಿ ಇತ್ತು. ಇನ್ನು ಇದೇ ರೀತಿ ವರ್ಷದ ಹಿಂದಿನ ಇದೇ ಅವಧಿಯಲ್ಲಿ ಜಿಯೋದ ಆದಾಯ 22,633 ಕೋಟಿ ರೂಪಾಯಿ ಇತ್ತು. ಅದು ಈಗ 24,856 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ.
ಮುಕೇಶ್ ಅಂಬಾನಿ ಹೇಳುವುದೇನು?
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ ಮಾತನಾಡಿ, "ಎಲ್ಲ ವ್ಯಾಪಾರ ವಿಭಾಗಗಳಿಂದ ಬಲವಾದ ಕಾರ್ಯಾಚರಣೆ ಮತ್ತು ಹಣಕಾಸಿನ ಕೊಡುಗೆಯಿಂದಾಗಿ ರಿಲಯನ್ಸ್ ಮತ್ತೊಂದು ತ್ರೈಮಾಸಿಕ ಬೆಳವಣಿಗೆಯನ್ನು ನೀಡಲು ಸಹಾಯ ಮಾಡಿದೆ," ಎಂದು ಹೇಳಿದ್ದಾರೆ.
ರಿಲಯನ್ಸ್ ಸಿಎಫ್ಒ ಶ್ರೀಕಾಂತ್ ವೆಂಕಟಾಚಾರಿ ಮಾತನಾಡಿ, "ನಾವು ಕತಾರ್ ಇನ್ವೆಸ್ಟ್ ಮೆಂಟ್ ಅಥಾರಿಟಿ (QIA) ಮತ್ತು ಕೆಕೆಆರ್ (KKR) ನಿಂದ ರಿಲಯನ್ಸ್ ರೀಟೇಲ್‌ಗೆ ಪಡೆದ ಫಂಡ್‌ನಿಂದ 1.17 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಸಾಲ ಕಡಿಮೆಯಾಗಿದೆ," ಎಂದರು.
"5ಜಿ ನೆಟ್‌ವರ್ಕ್ ಜಾರಿಯು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿರುವುದರಿಂದ ಬಂಡವಾಳ ಅಗತ್ಯದ ತೀವ್ರತೆಯು ಗಣನೀಯವಾಗಿ ಕುಸಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದರು.
ರಿಲಯನ್ಸ್ ಷೇರು ಹೇಗಿದೆ?
ಇನ್ನು ಎರಡನೇ ತ್ರೈಮಾಸಿಕ ವರದಿ ಬಳಿಕ (ಕೊನೆಯ ವಹಿವಾಟು ಅಕ್ಟೋಬರ್ 27, ಶುಕ್ರವಾರ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್ ಷೇರು ಸುಮಾರು ಶೇಕಡ 1.78 ರಷ್ಟು ಏರಿಕೆಯಾಗಿ, 2,266.15 ರೂಪಾಯಿಗೆ ತಲುಪಿದೆ.


Click it and Unblock the Notifications