ಕೆಲ ದುಷ್ಕರ್ಮಿಗಳು ನಕಲಿ ವೆಬ್ ಸೈಟ್ ಗಳನ್ನು ಸೃಷ್ಟಿಸಿ, ತಾವು ಜಿಯೋಮಾರ್ಟ್ ಭಾಗವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಜಿಯೋ ಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕರನ್ನು ವಂಚಿಸುತ್ತಿರುವುದು ಕಂಪೆನಿಯ ಗಮನಕ್ಕೆ ಬಂದಿದೆ. ಇಂಥ ದುಷ್ಕರ್ಮಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ರಿಲಯನ್ಸ್ ರೀಟೇಲ್ ತಿಳಿಸಿದೆ.
ರಿಲಯನ್ಸ್ ನ ಸಾಮಾಜಿಕ ಜಾಲತಾಣ ಪ್ಲಾಟ್ ಫಾರ್ಮ್ ಗಳಲ್ಲಿ ಎಚ್ಚರಿಕೆ ನೋಟಿಸ್ ಹಾಕಲಾಗಿದೆ. "ನಾವು ಸಾರ್ವಜನಿಕರ ಗಮನಕ್ಕೆ ತರಲು ಬಯಸುವ ವಿಷಯ ಏನೆಂದರೆ, ಸದ್ಯಕ್ಕೆ ನಾವು ಯಾವುದೇ ಡೀಲರ್ ಷಿಪ್ ಅಥವಾ ಫ್ರಾಂಚೈಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಇನ್ನು ಫ್ರಾಂಚೈಸಿ- ಏಜೆಂಟ್ ನೇಮಕ ಮಾಡಿಕೊಂಡು, ಅವರ ಮೂಲಕ ಹೊಸ ಡೀಲರ್ ಅಥವಾ ಫ್ರಾಂಚೈಸಿಯನ್ನು ಯಾವುದೇ ಬಗೆಯಲ್ಲೂ ನೇಮಿಸಿಕೊಳ್ಳುತ್ತಿಲ್ಲ. ಫ್ರಾಂಚೈಸಿ ಆಗಿ ನೇಮಿಸಿಕೊಳ್ಳುವ ಸಲುವಾಗಿ ಯಾವ ಹಣವನ್ನು ಸಹ ಪಡೆಯುತ್ತಿಲ್ಲ" ಎಂದು ತಿಳಿಸಲಾಗಿದೆ.
ಇನ್ನೂ ಮುಂದುವರಿದು, ಕೆಲವು ದುಷ್ಕರ್ಮಿಗಳು ಕೆಲವು ನಕಲಿ ವೆಬ್ ಸೈಟ್ ಗಳನ್ನು ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ತಾವು ಜಿಯೋ ಮಾರ್ಟ್ ಜತೆಗೆ ನಂಟನ್ನು ಹೊಂದಿದ್ದೇವೆ ಎಂದು ಬಿಂಬಿಸಿಕೊಂಡು, ಜಿಯೋಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕ ಜನರನ್ನು ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ.

ಈಗಾಗಲೇ ಗುರುತಿಸಲಾದ ಕೆಲವು ನಕಲಿ ವೆಬ್ ಸೈಟ್ ಗಳ ವಿಳಾಸವನ್ನು ಸಹ ನೀಡಲಾಗಿದೆ. ಅವುಗಳ ವಿವರ ಹೀಗಿದೆ:
1. jmartfranchise.in 6. jiomartfranchiseonline.com
2. jiodealership.com 7. jiomartsfranchises.online
3. jiomartfranchises.com 8. jiomart-franchise.com
4. jiomartshop.info 9. jiomartindia.in.net
5. jiomartreliance.com 10. jiomartfranchise.co
ಕಂಪೆನಿಯ ಟ್ರೇಡ್ ಮಾರ್ಕ್ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ದಾವೆ ಹೂಡಲು ಕಂಪೆನಿ ಹಿಂಜರಿಯುವುದಿಲ್ಲ. ಕಂಪೆನಿಯ ಪ್ರತಿಷ್ಠೆ ಹಾಗೂ ವರ್ಚಸ್ಸು ರಕ್ಷಿಸಿಕೊಳ್ಳುವುದು ಸಹ ಆದ್ಯತೆಯ ವಿಷಯವಾಗಿದೆ ಎಂದು ರಿಲಯನ್ಸ್ ರೀಟೇಲ್ ನೋಟಿಸ್ ನಲ್ಲಿ ಎಚ್ಚರಿಕೆ ನೀಡಿದೆ. ಇಂಥ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಕಂಪೆನಿಯ ಕಾನೂನು ವಿಭಾಗಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.


Click it and Unblock the Notifications