ಬೆಂಗಳೂರು, ಮಾರ್ಚ್ 31: ಬೈಜುಸ್ ಸಂಸ್ಥೆ ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ. ಈ ನಡುವೆ ಭಾರಿ ಬದಲಾವಣೆ ಮಾಡಿ ಸಂಸ್ಥೆಯಲ್ಲಿ ಹೊಸ ಗಾಳಿ ಎಬ್ಬಿಸಲು ನೂತನ ಆಡಳಿತ ಮಂಡಳಿ ಮುಂದಾಗಿದೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ಕೂಡ ಈಗ ಕಂಪನಿಯ ಒಳಗೆ ನಡೆದಿದೆ.
ಬೈಜುಸ್ ಕಂಪನಿ ಮಾತೃಸಂಸ್ಥೆ ಥಿಂಕ್ & ಲರ್ನ್ ಕರೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ಮಂಡಿಸಿದ ನಿರ್ಣಯಕ್ಕೆ ಷೇರುದಾರರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಅಂತಾ ಹೇಳಲಾಗಿದೆ. ಈ ಮೂಲಕ ಕಂಪನಿ 200 ಮಿಲಿಯನ್ ಡಾಲರ್ ಕೋಟಿ ಮೊತ್ತದ ಅಧಿಕೃತ ಷೇರು ಬಂಡವಾಳ ಹೆಚ್ಚಳಕ್ಕೆ ಒಪ್ಪಿಗೆ ಪಡೆಯುವಲ್ಲಿ ಬಹುತೇಕ ಯಶಸ್ವಿ ಆದಂತಾಗಿದೆ. ಈ ಬೆಳವಣಿಗೆ ಸಂಸ್ಥೆಯಲ್ಲಿ ಈಗ ಮತ್ತೊಂದು ರೀತಿಯ ಹುಮ್ಮಸ್ಸು ತುಂಬಿದಂತೆ ಕಾಣುತ್ತಿದೆ. ಕಳೆದ ಹಲವು ತಿಂಗಳ ಗೊಂದಲಕ್ಕೆ ಮುಕ್ತಿ ಸಿಗುವ ನಿರೀಕ್ಷೆಯೂ ಈಗ ಮೂಡಿದೆ.

ಪ್ರಮುಖ ಹೂಡಿಕೆದಾರರೇ ಗೈರು!
ಹೀಗಿದ್ದರೂ ಬೈಜುಸ್ ಸಂಸ್ಥೆಯ ಸಿಇಒ ಬೈಜು ರವೀಂದ್ರನ್ & ಅವರ ಕುಟುಂಬ ಸದಸ್ಯರನ್ನು ಆಡಳಿತ ಮಂಡಳಿಯಿಂದ ಹೊರಹಾಕಲು ಆಗ್ರಹಿಸಿದ್ದ ಪ್ರಮುಖ ಹೂಡಿಕೆದಾರರು ಸಭೆಯಿಂದ ಅಂತರ ಕಾಯ್ದುಕೊಂಡ ಕಾರಣ ಕುತೂಹಲ ದುಪ್ಪಟ್ಟಾಗಿದೆ. ಈ ಪ್ರಮುಖ ಸಭೆಯಲ್ಲಿ ಈಗ ಸುಮಾರು 20 ಹೂಡಿಕೆದಾರರ ಪರ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ನಿರ್ಣಯಕ್ಕೆ ಸಂಬಂಧಿಸಿದಂತೆ ಕೆಲವರು ಅಂಚೆ ಮೂಲಕ ಮತ ಹಾಕಲು ಕೋರಿದರು.
ಈ ಸಭೆಯ ಮಧ್ಯೆ ಅಂಚೆ ಮತದಾನ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಬಳಿಕ ಮಂಡನೆ ಆದ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂಬ ಮಾಹಿತಿ ಈಗ ಓಡಾಡುತ್ತಿದೆ. ಆದರೆ ಅಂಚೆ ಮತಗಳ ಎಣಿಕೆ ನಂತರ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಕೆಲವೇ ದಿನಗಳ ಹಿಂದೆ ಬೈಜುಸ್ ತನ್ನ ಹಲವು ಟ್ಯೂಷನ್ ಕೇಂದ್ರಗಳ ಬಗ್ಗೆ ಪ್ರಮುಖ ನಿರ್ಣಯ ಪ್ರಕಟಿಸಿತ್ತು. ಇದೀಗ ಬಂಡವಾಳ ಸಂಗ್ರಹಕ್ಕೆ ಮತ್ತೆ ಹೊಸ ತಂತ್ರ ರೂಪಸಿದಂತೆ ಕಾಣುತ್ತಿದೆ.
ಸಭೆ ಪ್ರಶ್ನಿಸಿ ಅರ್ಜಿ ದಾಖಲು!
ಇದೆಲ್ಲಾ ಒಂದು ಕಡೆಯಾದರೆ ಮತ್ತೊಂದು ಕಡೆ ಬೈಜುಸ್ ಆಡಳಿತ ಮಂಡಳಿ ಕರೆದಿದ್ದ ಸಭೆ ಪ್ರಶ್ನಿಸಿ ಪ್ರಮುಖ 6 ಹೂಡಿಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಈಗ ಮನವಿ ಮಾಡಿದ್ದಾರೆ. ಈ ಮೂಲಕ ಎನ್‌ಸಿಎಲ್‌ಟಿ ಬೆಂಗಳೂರು ಘಟಕದ ಮೆಟ್ಟಿಲೇರಿದ್ದಾರೆ. ಕಂಪನಿಯಲ್ಲಿ ಈ ಹೂಡಿಕೆದಾರರು ಶೇಕಡಾ 32 ರಷ್ಟು ಷೇರು ಹೊಂದಿರುವುದು ಗಮನವನ್ನ ಕೂಡ ಸೆಳೆದಿದೆ.
ಮತ್ತೊಂದು ಕಡೆ, ಇನ್ನುಳಿದ ಹೂಡಿಕೆದಾರರು ನಿರ್ಣಯದ ಪರವಾಗಿಯೇ ನಿಂತಿರುವುದು ಕೂಡ ಇದೀಗ ಗಮನ ಸೆಳೆದಿದೆ. ಈ ನಿರ್ಣಯಕ್ಕೆ ಸಂಬಂಧಿಸಿದಂತೆ, ಅಂಚೆ ಮೂಲಕ ಮತ ಚಲಾಯಿಸಲು ಏಪ್ರಿಲ್ 6ರ ವರೆಗೆ ಅವಕಾಶ ಸಿಕ್ಕಿದೆ. ಹೀಗಾಗಿ ರಿಸಲ್ಟ್ ಹೊರಬಿದ್ದ ನಂತರ ಎಲ್ಲವೂ ಕನ್ಫರ್ಮ್ ಆಗಲಿದೆ.


Click it and Unblock the Notifications