ದೇಶದ ಪ್ರಧಾನಿ ಅಂದ್ಮೇಲೆ ಭದ್ರತೆ ಏನು ಕಮ್ಮಿ ಇರೋಲ್ಲ.ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಭದ್ರತೆ ಸ್ವಲ್ಪ ಹೆಚ್ಚು ಇರೋದನ್ನ ನೀವೆಲ್ಲಾ ನೋಡಿದ್ದೀರಿ. ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೂ ಹಣ ಮೀಸಲಿರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಎಲ್ಲಿಗೆ ತೆರಳಿದ್ರೂ ಎಸ್‌ಪಿಜಿ (ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ಭದ್ರತೆ ಇದ್ದೇ ಇರುತ್ತೆ. ಎಸ್‌ಪಿಜಿಯ ಒಪ್ಪಿಗೆ ಇರದೇ ಪ್ರಧಾನಿ ಸಾರ್ವಜನಿಕ ಸ್ಥಳಗಳಿಗೆ ಸುಖಾಸುಮ್ಮನೆ ಭೇಟಿ ನೀಡಲು ಸಾಧ್ಯವಿಲ್ಲ.
3000 ಮಂದಿಯ ಬಲಿಷ್ಠ ತಂಡದ ರಕ್ಷಣೆಯಲ್ಲಿರುವ ಪ್ರಧಾನಿ ಮೋದಿ
ಹೌದು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಪ್ರಸ್ತುತ 3000 ಮಂದಿಯ ಬಲಿಷ್ಠ ತಂಡ ಹೊಂದಿರುವ ಎಸ್‌ಪಿಜಿ (ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ರಕ್ಷಣೆ ಇದೆ. ಯಾವುದೇ ಸ್ಥಳವಾಗಲಿ ಎಸ್‌ಪಿಜಿಯ ಅನುಮತಿಯಿಲ್ಲದೆ ಯಾರ ಪ್ರವೇಶಕ್ಕೂ ಅನುಮತಿ ಇರೋದಿಲ್ಲ. ಈ ಭದ್ರತೆಗಾಗಿಯೇ ಕೇಂದ್ರ ಬಜೆಟ್‌ನಲ್ಲಿ ಕೋಟ್ಯಾಂತರ ರುಪಾಯಿ ಘೋಷಣೆ ಮಾಡಲಾಗುತ್ತದೆ.
2020ರಲ್ಲಿ ಮೋದಿ ಭದ್ರತೆಗೆ ಸುಮಾರು 600 ಕೋಟಿ ರುಪಾಯಿ ಮೀಸಲು
ಇದನ್ನು ಕೇಳಿದರೆ ಆಶ್ಚರ್ಯವಾದರೂ ನಿಜ. ಇತ್ತೀಚೆಗಷ್ಟೇ ಫೆಬ್ರವರಿ 2ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ನರೇಂದ್ರ ಮೋದಿಯ ಅವರ ರಕ್ಷಣೆಗಾಗಿಯೇ ಬಜೆಟ್ ನಲ್ಲಿ ಸುಮಾರು 600 ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. 2020-21ನೇ ಆರ್ಥಿಕ ವರ್ಷದಲ್ಲಿ 600 ಕೋಟಿ ರುಪಾಯಿಗಳನ್ನು ಮೋದಿ ಭದ್ರತೆಗೆ ಮೀಸಲಿಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 540 ಕೋಟಿ ರುಪಾಯಿಗಳನ್ನು ನೀಡಲಾಗಿತ್ತು.
ಪ್ರಧಾನಿ ರಕ್ಷಣೆಗೆ ಪ್ರತಿ ಗಂಟೆಗೆ ಖರ್ಚಾಗುತ್ತೆ 6 ಲಕ್ಷದ 75 ಸಾವಿರ ರುಪಾಯಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಗ್ರರಿಂದ ಮತ್ತು ಕೆಲ ಸಮಾಜ ವಿದ್ರೋಹಿ ಸಂಘಟನೆಗಳಿಂದ ದೊಡ್ಡಮಟ್ಟದಲ್ಲಿ ಜೀವ ಬೆದರಿಕೆ ಇರುವುದನ್ನು ಒಪ್ಪಿಕೊಂಡಿದ್ದ ಕೇಂದ್ರ ಸರ್ಕಾರವು ಈ ಹಿಂದೆ ಭದ್ರತಾ ಮಾರ್ಗಸೂಚಿಯನ್ನು ಪರಿಷ್ಕರಿಸಿತ್ತು. ಎಸ್‌ಪಿಜಿ ತಪಾಸಣೆಯ ನಂತರವೇ ಮೋದಿ ಅವರ ಸನಿಹಕ್ಕೆ ಸಚಿವರು ಮತ್ತು ಅಧಿಕಾರಿಗಳನ್ನು ಕಳುಹಿಸಲಾಗುತ್ತಿತ್ತು.
ಪ್ರಧಾನಿ ಭದ್ರತೆ ಹೆಚ್ಚಳದಿಂದ ಬಜೆಟ್‌ನಲ್ಲಿ ಹಣದ ಮೀಸಲು ಕೂಡ 10 ಪರ್ಸೆಂಟ್‌ನಷ್ಟು ಹೆಚ್ಚಾಗಿದೆ. ಇದಕ್ಕೆಂದು ಸುಮಾರು 600 ಕೋಟಿ ಮೀಸಲಿಡಲಾಗಿದ್ದು, 3000 ಸಿಬ್ಬಂದಿಗಳ ರಕ್ಷಣೆಯಲ್ಲಿರುವ ಮೋದಿ ರಕ್ಷಣೆಗೆ ಪ್ರತಿ ಗಂಟೆಗೆ 6 ಲಕ್ಷದ 75 ಸಾವಿರ ರುಪಾಯಿ ಖರ್ಚಾಗುತ್ತದೆ.
ವಿಐಪಿಗಳಿಗೆ ನೀಡಿದ್ದ ಎಸ್‌ಪಿಜಿ ರಕ್ಷಣೆ ಹಿಂಪಡೆದಿದ್ದ ಕೇಂದ್ರ ಸರ್ಕಾರ
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಈ ಹಿಂದೆ ನೀಡಲಾಗಿದ್ದ ಎಸ್‌ಪಿಜಿ ರಕ್ಷಣೆಯನ್ನು ಕಳೆದ ನವೆಂಬರ್‌ನಲ್ಲಿ ಮರುಪರಿಶೀಲನೆಯ ನಂತರ ಹಿಂಪಡೆಯಲಾಗಿತ್ತು. ಈಗ ಗಾಂಧಿ ಕುಟುಂಬಕ್ಕೆ ಕೇಂದ್ರೀಯ ಮೀಸಲು ಪೊಲೀಸರು (ಸಿಆರ್‌ಪಿಫ್) ಝೆಡ್ ಪ್ಲಸ್ ಭದ್ರತೆ ನೀಡುತ್ತಿದ್ದಾರೆ. ದೇಶದಲ್ಲಿ 56 ವಿಐಪಿಗಳಿಗೆ ಸಿಆರ್‌ಪಿಎಫ್ ಸೆಕ್ಯುರಿಟಿ ನೀಡಲಾಗಿದೆ.
ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಮತ್ತು ವಿ.ಪಿ.ಸಿಂಗ್ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನೂ, ಬೆದರಿಕೆಯ ಸ್ಥಿತಿಗತಿ ಪರಿಶೀಲನೆಯ ನಂತರ ಕೇಂದ್ರ ಸರ್ಕಾರ ಈ ಹಿಂದೆ ಹಿಂಪಡೆದಿತ್ತು.


Click it and Unblock the Notifications