ಸಿನಿಮಾ ನಿರ್ಮಾಣ ನಿಂತು ಹೋಗಿರುವುದರಿಂದ ಇದೀಗ ಚಿತ್ರರಂಗಕ್ಕೂ ಸ್ಯಾಲರಿ ಕಟ್ ಕಾಲಿಟ್ಟಿದೆ. ಅಂದ ಹಾಗೆ ಇದು ಹಿಂದಿ ಚಿತ್ರರಂಗದ ಸುದ್ದಿ. ಕಾರ್ಯ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಈ ಹೆಜ್ಜೆ ಇಡಲಾಗಿದೆ. ಒಂದು ಅಂದಾಜಿನ ಪ್ರಕಾರ, ರಣ್ಬೀರ್ ಕಪೂರ್, ರಣ್ವೀರ್ ಸಿಂಗ್, ದೀಪೀಕಾ ಪಡುಕೋಣೆ ಒಂದು ಸಿನಿಮಾಗೆ 20ರಿಂದ 35 ಕೋಟಿ ಸಂಭಾವನೆ ಪಡೆಯುತ್ತಾರೆ.
ಇದೀಗ ಆ ಮೊತ್ತದಲ್ಲಿ 40- 50 ಪರ್ಸೆಂಟ್ ಕಡಿತ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇನ್ನು ಆಯುಷ್ಮಾನ್ ಖುರಾನಾ, ತಾಪ್ಸಿ ಪನ್ನು ಮತ್ತಿತರರು 20- 30 ಪರ್ಸೆಂಟ್ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ.
"ಸಿನಿಮಾ ರಂಗಕ್ಕೂ ಬಜೆಟ್ ಸಮಸ್ಯೆ ಎದುರಾಗಿದೆ. ಚಿತ್ರಮಂದಿರ ಯಾವಾಗ ಆರಂಭ ಆಗುತ್ತದೋ ಗೊತ್ತಿಲ್ಲ. ಎಲ್ಲಿಯ ತನಕ ಇದು ಮುಂದುವರಿಯುತ್ತದೋ ಅಲ್ಲಿಯವರೆಗೆ ವೆಚ್ಚ ಹೆಚ್ಚಾಗುತ್ತಲೇ ಹೋಗುತ್ತದೆ. ಆದ್ದರಿಂದ ಸಂಭಾವನೆ ಕಡಿತ ಸರಿಯಾದ ನಿರ್ಧಾರ. ಆ ಬಗ್ಗೆ ಮಾತುಕತೆ ನಡೆಯುತ್ತಿದೆ" ಎಂದು ಮೂಲಗಳು ತಿಳಿಸಿವೆ.
40ರಿಂದ 60 ಕೋಟಿ ಸಂಭಾವನೆ
ಇನ್ನು ನಿರ್ಮಾಣವನ್ನು ಸಹ ನೋಡಿಕೊಳ್ಳುವ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತಿತರರು ವ್ಯವಹಾರದ ಚೌಕಾಶಿ ಶುರು ಮಾಡಿದ್ದಾರೆ. ಈ ನಟರು ಸಾಮಾನ್ಯವಾಗಿ 40ರಿಂದ 60 ಕೋಟಿ ಸಂಭಾವನೆ ಪಡೆಯುತ್ತಾರೆ. ಇದರ ಜತೆಗೆ ಲಾಭ ಹಂಚಿಕೆ ಒಪ್ಪಂದವನ್ನು ಸಹ ಮಾಡಿಕೊಂಡಿರುತ್ತಾರೆ, ಬಾಕ್ಸ್ ಆಫೀಸ್ ನಲ್ಲಿ ಸಂಗ್ರಹ ಆಗುವ ಒಟ್ಟು ಮೊತ್ತದ ನಲವತ್ತರಿಂದ ಐವತ್ತರಷ್ಟು ಮೊತ್ತ ಇವರಿಗೆ ಸೇರಿಬಿಡುತ್ತದೆ.
ಸಿನಿಮಾದಿಂದ ಬಂದ ಲಾಭದಲ್ಲಿ ಮಾತ್ರ ಪಾಲು ಪಡೆಯಬಹುದು
ಆದರೆ, ಈಗ ಈ ನಟರು ಸಿನಿಮಾದಿಂದ ಲಾಭವನ್ನು ಮಾತ್ರ ಪಡೆಯುವ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಇದ್ದಾರೆ. ತಜ್ಞರು ಹೇಳುವಂತೆ, ನಟ- ನಟಿಯರು ಹೀಗೇ ನಿರ್ಧಾರ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಕೆಲವು ಸಿನಿಮಾಗೆ 10 ಪರ್ಸೆಂಟ್, ಮತ್ತೆ ಕೆಲವಕ್ಕೆ 40 ಪರ್ಸೆಂಟ್ ಸಂಭಾವನೆ ಬಿಡಲು ಒಪ್ಪಬಹುದು. ಇನ್ನೂ ಕೆಲವಕ್ಕೆ ಸಿನಿಮಾದಿಂದ ಬಂದ ಲಾಭದಲ್ಲಿ ಮಾತ್ರ ಪಾಲು ಪಡೆಯಬಹುದು ಎನ್ನುತ್ತಾರೆ.
ಸಾಲದ ಮೇಲಿನ ಬಡ್ಡಿ ಬೆಳೆಯುತ್ತಿದೆ
ಸಿನಿಮಾ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲದ ಮೇಲಿನ ಬಡ್ಡಿ ಹೇಗೆ ಬೆಳೆಯುತ್ತಿದೆ ಎಂಬ ಬಗ್ಗೆ ಗಮನ ಸೆಳೆದು ನಿರ್ಮಾಪಕರ ಸಂಘ ಹೇಳಿಕೆ ಬಿಡುಗಡೆ ಮಾಡಿತ್ತು. ಬಾಡಿಗೆ, ಸಲಕರಣೆ ವೆಚ್ಚ ಹಾಗೂ ತಂತ್ರಜ್ಞರ ಸಂಭಾವನೆ ಐದರಿಂದ ಹತ್ತು ಪರ್ಸೆಂಟ್ ಕಡಿಮೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಸಿನಿಮಾ ರಂಗದಲ್ಲಿ ಒಂದು ಕಡೆ ನೆಲೆ ನಿಂತು ಕೆಲಸ ಮಾಡುವ ಕಾರ್ಮಿಕರಿಲ್ಲ. ಫ್ರೀಲ್ಯಾನ್ಸರ್ ಗಳಾಗಿ ಕೆಲಸ ಮಾಡುತ್ತಾರೆ. ಕೆಲಸ ನಡೆದರೆ ವೇತನ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿಯೇ ಹಲವರದು.
ದುಬಾರಿ ಖರ್ಚಿಗೆ ಕಡಿವಾಣ ಬೀಳಬಹುದು
ಈ ಮಧ್ಯೆ ಭಾರತ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರವು ಸಿನಿಮಾ ಚಿತ್ರೀಕರಣಕ್ಕೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿ, ಅವಕಾಶ ಮಾಡಿಕೊಟ್ಟಿದೆ. ಆದರೆ ನಿರ್ಮಾಣ ಶುರು ಆಗುವುದಕ್ಕೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕು. ಬಜೆಟ್ ಕೂಡ ಮೂವತ್ತರಿಂದ ನಲವತ್ತು ಪರ್ಸೆಂಟ್ ಕಡಿಮೆ ಮಾಡಬೇಕಿರುವ ಒತ್ತಡದಲ್ಲಿ ಚಿತ್ರ ತಂಡಗಳು ಇರುವುದರಿಂದ ವಿಲಾಸಿ ಸೆಟ್ ಗಳು, ದುಬಾರಿ ಖರ್ಚಿಗೆ ಮುಂದಾಗುವ ಸಾಧ್ಯತೆಗಳಿಲ್ಲ.


Click it and Unblock the Notifications