ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಮಡಚಬಹುದಾದ ಸ್ಮಾರ್ಟ್ ಫೋನ್. ಅದರ ಬೆಲೆ 1.10 ಲಕ್ಷ ರುಪಾಯಿ. ಶುಕ್ರವಾರದಂದು ಭಾರತದಲ್ಲಿ ಮಾರಾಟ ಆರಂಭಿಸಿದ ಕೆಲ ನಿಮಿಷಗಳಲ್ಲೇ ದಾಸ್ತಾನು ಮುಗಿದಿದೆ. ಗ್ಯಾಲಕ್ಸಿ Z ಫ್ಲಿಪ್ ಫೋನ್ 'ಸೋಲ್ಡ್ ಔಟ್' ಎಂಬ ಸಂದೇಶವನ್ನು ಸ್ಯಾಮ್ಸಂಗ್ ಇಂಡಿಯಾ ಆನ್ ಲೈನ್ ಸ್ಟೋರ್ ನಲ್ಲಿ ಹಾಕಲಾಗಿದೆ.
ಬೆಳಗ್ಗೆ 11 ಗಂಟೆಗೆ ಆನ್ ಲೈನ್ ಮಾರಾಟ ಆರಂಭಿಸಿತ್ತು. ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ 'ಸೋಲ್ಡ್ ಔಟ್' ಆಗಿದೆ. ಪ್ರಮುಖ ಮಾರಾಟ ಮಳಿಗೆಗಳು ಗ್ಯಾಲಕ್ಸಿ Z ಫ್ಲಿಪ್ ಗಳ ಪ್ರಿ ಬುಕ್ಕಿಂಗ್ ಸ್ವೀಕರಿಸುತ್ತಿವೆ. ಅದು ಕೂಡ ಔಟ್ ಆಫ್ ಸ್ಟಾಕ್ ಆಗಿದೆ. ಪ್ರಿ ಬುಕ್ ಮಾಡಬೇಕು ಅಂದರೆ ಪೂರ್ತಿ ಮೊತ್ತವಾದ 1,09,999 ರುಪಾಯಿಯನ್ನು ಪಾವತಿ ಮಾಡಬೇಕು.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಪ್ರಿ ಬುಕ್ ಮಾಡಿದವರಿಗೆ ಫೆಬ್ರವರಿ 26ರಿಂದ ಡೆಲಿವರಿ ನೀಡಲು ಆರಂಭಿಸಲಾಗುತ್ತದೆ ಎಂದು ಸ್ಯಾಮ್ಸಂಗ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಎರಡು ಬಣ್ಣದಲ್ಲಿ ಲಭ್ಯವಿದೆ. ಮಿರರ್ ಪರ್ಪಲ್ ಹಾಗೂ ಮಿರರ್ ಬ್ಲ್ಯಾಕ್ ನಲ್ಲಿ ದೊರೆಯುತ್ತದೆ. ಫೆಬ್ರವರಿ 28ರಿಂದ ಮತ್ತೆ ಪ್ರಿ ಬುಕ್ಕಿಂಗ್ ಶುರುವಾಗಲಿದ್ದು, ಮಾರ್ಚ್ ನಲ್ಲಿ ಡೆಲಿವರಿ ನೀಡಲಾಗುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಮೊದಲ ಬಾರಿಗೆ ಮಡಚಬಹುದಾದ ಗ್ಲಾಸ್ ಫೋನ್ ಆಗಿದೆ. 6.7 ಇಂಚಿನ ಡಿಸ್ ಪ್ಲೇ ಇರುತ್ತದೆ. ಎರಡು ಸಿಮ್ ಇದರಲ್ಲಿ ಬಳಸಬಹುದು. ಒಂದು ಇ ಸಿಮ್ ಮತ್ತು ನ್ಯಾನೋ ಸಿಮ್ ಕಾರ್ಡ್ ಬಳಸಬಹುದು. ಸದ್ಯಕ್ಕೆ ಏರ್ ಟೆಲ್ ಹಾಗೂ ಜಿಯೋದಿಂದ ಇ ಸಿಮ್ ಸೇವೆ ಒದಗಿಸಲಾಗುತ್ತಿದೆ.
ಭಾರತದಲ್ಲಿ ಈ ಮೊಬೈಲ್ ಫೋನ್ ಸ್ನ್ಯಾಪ್ ಡ್ರಾಗನ್ 855+ ಪ್ರೊಸೆಸರ್ ಮತ್ತು 8 ಜಿಬಿ RAM ಹಾಗೂ 256 ಜಿಬಿ ಸಂಗ್ರಹ ಸಾಮರ್ಥ್ಯ ಇರುತ್ತದೆ.


Click it and Unblock the Notifications