ಸೌದಿ ಅರಾಮ್ಕೋ ಭಾನುವಾರ ವರದಿ ಮಾಡಿರುವ ಪ್ರಕಾರ, 2019ರಲ್ಲಿ ಅದರ ಲಾಭದ ಪ್ರಮಾಣ 20.6ರಷ್ಟು ಇಳಿಕೆಯಾಗಿದೆ. ತೈಲ ದರದಲ್ಲಿನ ಕುಸಿತ, ಉತ್ಪಾದನೆಯ ಪ್ರಮಾಣವೇ ಇದಕ್ಕೆ ಕಾರಣ ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಡಿಸೆಂಬರ್ ನಲ್ಲಿ $ 29.4 ಬಿಲಿಯನ್ ನ ಐಪಿಒ ಬಿಡುಗಡೆ ಮಾಡಿದ ನಂತರದಲ್ಲಿ ಮೊದಲ ಬಾರಿಗೆ ಸೌದಿ ಅರಾಮ್ಕೋ ಫಲಿತಾಂಶ ಪ್ರಕಟಿಸಿದೆ. ಕಳೆದ ವರ್ಷ ಕಂಪೆನಿಯು 88.2 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಲಾಭ ಗಳಿಸಿದೆ. ಆದರೆ 2018ರಲ್ಲಿ ಸೌದಿ ಅರಾಮ್ಕೋ ನಿವ್ವಳ ಲಾಭ 111.1 ಬಿಲಿಯನ್ ಇತ್ತು.
ಲಾಭದ ಪ್ರಮಾಣ ಕಡಿಮೆ ಆಗಿರುವುದಕ್ಕೆ ಮುಖ್ಯವಾಗಿ ತೈಲದ ಬೆಲೆಯಲ್ಲಿನ ಇಳಿಕೆ ಹಾಗೂ ಉತ್ಪಾದನೆ ಪ್ರಮಾಣದಲ್ಲಿನ ಕಡಿತವೇ ಕಾರಣ. ಅದರ ಜತೆಗೆ ರಿಫೈನಿಂಗ್ ಮತ್ತು ಕೆಮಿಕಲ್ ಮಾರ್ಜಿನ್ ಕೂಡ ಕಡಿಮೆ ಆಗಿದೆ ಎಂದು ಸೌದಿ ಅರಾಮ್ಕೋ ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ವೈರಾಣು ಹಬ್ಬುತ್ತಿರುವುದಾಗಲೀ ಅಥವಾ ಸೌದಿ ಹಾಗೂ ರಷ್ಯಾ ಮಧ್ಯದ ತೈಲ ಸಮರದಿಂದಾಗಲೀ ಕಳೆದ ವರ್ಷದ ಲಾಭದಲ್ಲಿ ಇಳಿಕೆಯಾಗಿಲ್ಲ. ಹೋದ ವರ್ಷ ವಿಭಿನ್ನವಾಗಿತ್ತು. ಕೆಲವು ಅಂದುಕೊಂಡು ಸನ್ನಿವೇಶ ಮತ್ತು ಕೆಲವು ಅಂದುಕೊಳ್ಳದ ಘಟನೆಗಳು ಪರಿಣಾಮ ಬೀರಿದವು ಎಂದು ಕಂಪೆನಿ ಸಿಇಒ ತಿಳಿಸಿದ್ದಾರೆ.
ಆದರೆ, ಅರಾಮ್ಕೋದಿಂದ 2019ರ ಸಾಲಿಗೆ 73.2 ಬಿಲಿಯನ್ ಅಮೆರಿಕನ್ ಡಾಲರ್ ಡಿವಿಡೆಂಡ್ ವಿತರಿಸುವುದಾಗಿ ತಿಳಿಸಿದೆ. ಆದರೆ ಐಪಿಒ ಸಂದರ್ಭದಲ್ಲಿ ಕಂಪೆನಿಯು ಮುಂದಿನ ಐದು ವರ್ಷಗಳ ಕಾಲ ಕನಿಷ್ಠ 75 ಬಿಲಿಯನ್ ಪಾವತಿಸುವುದಾಗಿ ಭರವಸೆ ನೀಡಿತ್ತು.
ಡಿಸೆಂಬರ್ 11ನೇ ತಾರೀಕು ಲಿಸ್ಟಿಂಗ್ ಆದ ಸೌದಿ ಅರಾಮ್ಕೋ ಷೇರು 19 ಪರ್ಸೆಂಟ್ ಏರಿಕೆಯಾಗಿ, 38 ರಿಯಾಲ್ (10.1 ಅಮೆರಿಕನ್ ಡಾಲರ್) ತಲುಪಿತ್ತು. ಆದರೆ ತೈಲ ಬೆಲೆ ಇಳಿಕೆಯಾಗುತ್ತಾ ಬಂದಂತೆ ಅದರ ಗರಿಷ್ಠ ಮಟ್ಟದಿಂದ 29 ಪರ್ಸೆಂಟ್ ಇಳಿದು, ಸದ್ಯಕ್ಕೆ ಲಿಸ್ಟಿಂಗ್ ಬೆಲೆಗಿಂತ ಕಡಿಮೆಗೆ ವಹಿವಾಟು ನಡೆಸುತ್ತಿದೆ. ಆದರೆ ಈಗಲೂ ಸೌದಿ ಅರಾಮ್ಕೋ ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಲಿಸ್ಟೆಡ್ ಕಂಪೆನಿಯಾಗಿದೆ.


Click it and Unblock the Notifications