ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಏನು ಇಲ್ಲ ಎನ್ನುವಂತಾಗಿದೆ. ಮೊಬೈಲ್ ಜನರ ದೈನಂದಿನ ಚಟುವಟಿಕೆಗಳಲ್ಲಿ ಬೆರತು ಹೋಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರು ಮೊಬೈಲ್ ಮೇಲೆ ಹೆಚ್ಚು ಅವಲಂಭಿತವಾಗಿದ್ದಾರೆ. ಮೊಬೈಲ್ ಬಳಕೆ ಎಷ್ಟರ ಮಟ್ಟಿಗೆ ಆಗಿದೆ ಅಂದರೆ ಚಾರ್ಜ್ ಕೂಡ ಅಷ್ಟೇ ಬೇಗ ಖಾಲಿಯಾಗಿಬಿಡುತ್ತೆ.
ಜನರು ಮೊಬೈಲ್ ಚಾರ್ಜ್ ಕಡಿಮೆಯಾಯ್ತು ಎಂದಾಗ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಹುಡುಕೋದು ಸಾಮಾನ್ಯ. ಆದರೆ ಈ ಕೆಳಗಿನ ಮಾಹಿತಿ ಓದಿದ ಬಳಿಕ ನೀವು ಮೊಬೈಲ್ ಚಾರ್ಜ್ ಹಾಕುವುದಕ್ಕೆ ಮೊದಲು 2 ಸಲ ಯೋಚಿಸಿ.

ಏರ್‌ಪೋರ್ಟ್, ರೈಲ್ವೇ ಸ್ಟೇಷನ್, ರೈಲಿನ ಒಳಗೆ ಅಥವಾ ಹೋಟೆಲ್‌ಗಳಲ್ಲಿರುವ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ ಯೋಚಿಸಿ. ಯಾಕಂದ್ರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಅತ್ಯಮೂಲ್ಯ ದಾಖಲೆಗಳು ಸೋರಿಕೆಯಾಗಬಹುದು. ನಿಮ್ಮ ಮೊಬೈಲ್‌ನಲ್ಲಿರುವ ನಿಮ್ಮ ಮಾಹಿತಿಗಳು, ಪಾಸ್‌ವರ್ಡ್‌ಗೆ ಹ್ಯಾಕರ್ಸ್ ಕನ್ನ ಹಾಕಬಹುದು.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಸಿದೆ. ಚಾರ್ಜಿಂಗ್ ಕೇಂದ್ರಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ 2 ಬಾರಿ ಯೋಚಿಸಿ , ಇಲ್ಲದೆ ಹೋದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಅಮೂಲ್ಯವಾದ ಮಾಹಿತಿಗಳು, ಪಾಸ್‌ವರ್ಡ್ ಸೋರಿಕೆಯಾಗಬಹುದು ಎಂದು ಟ್ವೀಟ್ ಮಾಡಿದೆ.
'ಚಾರ್ಜಿಂಗ್ ಕೇಂದ್ರಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ 2 ಬಾರಿ ಯೋಚಿಸಿ. ಮಾಲ್ವೇರ್ ನಿಮ್ಮ ಮೊಬೈಲ್ ಹಾನಿ ಮಾಡಲು ದಾರಿ ಹುಡುಕಬಹುದು, ಅಲ್ಲದೆ ಹ್ಯಾಕರ್ಸ್‌ಗಳಿಗೆ ನಿಮ್ಮ ಮೊಬೈಲ್‌ನಲ್ಲಿರುವ ಪಾಸ್‌ವರ್ಡ್ ಹಾಗೂ ಖಾಸಗಿ ಮಾಹಿತಿಗಳನ್ನು ಕದಿಯಲು ದಾರಿ ಮಾಡಿಕೊಡಬಹುದು' ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಎಸ್‌ಬಿಐ ಸ್ಮಾರ್ಟ್ ಫೋನ್ ಬಳಸುವ ಎಲ್ಲಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಚಾರ್ಜಿಂಗ್ ಕೇಂದ್ರಗಳಲ್ಲಿ USB ಚಾರ್ಜರ್ ಹಗರಣದ ಮೂಲಕ ಹ್ಯಾಕರ್ಸ್ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಈ ಮೂಲಕ ನಿಮ್ಮ ಬ್ಯಾಂಕ್‌ನಲ್ಲಿ ಹಣಕ್ಕೆ ಕನ್ನ ಹಾಕಬಹುದಾಗಿದೆ ಎಂದು ಎಚ್ಚರಿಸಿದೆ.
ಚಾರ್ಜಿಂಗ್ ಕೇಂದ್ರಗಳಲ್ಲಿ ಮೊಬೈಲ್ ಹ್ಯಾಕ್ ಆಗುವುದನ್ನು ತಪ್ಪಿಸಲು ಏನು ಮಾಡಬೇಕು?
* ಚಾರ್ಜಿಂಗ್ ಕೇಂದ್ರಗಳಲ್ಲಿ ವಿದ್ಯುತ್ ಸಾಕೆಟ್ ಹಿಂದೆ ಸರಿಯಾಗಿದೆಯೇ ಎಂದು ಪರೀಕ್ಷಿಸಿ
* ನಿಮ್ಮ ಮೊಬೈಲ್ ನ ಅಸಲಿ ಜಾರ್ಜಿಂಗ್ ಕೇಬಲ್‌ಗಳನ್ನೇ ಬಳಸಿ
* ವಿದ್ಯುತ್ ಔಟ್‌ಲೇಟ್‌ನಿಂದ ಮಾತ್ರ ನೇರವಾಗಿ ಚಾರ್ಜ್ ಮಾಡಿ
* ಹೆಚ್ಚುವರಿ ಬ್ಯಾಟರಿಗಳನ್ನು ಇಲ್ಲವೇ ಪವರ್‌ಬ್ಯಾಂಕ್ ಇಟ್ಟುಕೊಳ್ಳಿ


Click it and Unblock the Notifications