ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪೆನಿಯಲ್ಲಿನ 2.1 ಕೋಟಿ ಷೇರನ್ನು ಆಫರ್ ಫಾರ್ ಸೇಲ್ (ಒಎಫ್ ಎಸ್) ಮೂಲಕ ಮಾರಾಟ ಮಾಡುವುದಾಗಿ ಗುರುವಾರ ಘೋಷಣೆ ಮಾಡಿದೆ. ಎಸ್ ಬಿಐ ಲೈಫ್ ಇನ್ಷೂರೆನ್ಸ್ ನಲ್ಲಿ ಸಾರ್ವಜನಿಕ ಸ್ವಾಮ್ಯದ ಎಸ್ ಬಿಐ ಮಾರ್ಚ್ 31ರ ಕೊನೆಗೆ 57.60% ಪಾಲನ್ನು ಹೊಂದಿದೆ.
ನಾನ್ ರೀಟೇಲ್ ಹೂಡಿಕೆದಾರರಿಗೆ ಜೂನ್ 12ನೇ ತಾರೀಕಿನಂದು ಎಸ್ ಬಿಐ ಲೈಫ್ ಒಎಫ್ ಎಸ್ ಆರಂಭವಾಗಲಿದೆ ಹಾಗೂ ಜೂನ್ 15ರಂದು ರೀಟೇಲ್ ಹೂಡಿಕೆದಾರರಿಗೆ ಶುರುವಾಗಲಿದೆ. ಆರಂಭಿಕ ಬೆಲೆ (ಫ್ಲೋರ್ ಬೆಲೆ) ಷೇರಿಗೆ ತಲಾ 725 ರುಪಾಯಿ ನಿಗದಿ ಮಾಡಲಾಗಿದೆ. ಇದೇ ದರದಲ್ಲಿ ಷೇರು ಮಾರಾಟದಿಂದ 1,525.5 ಕೋಟಿ ರುಪಾಯಿ ಸಂಗ್ರಹಿಸಲಿದೆ.
ಗುರುವಾರದ (ಜೂನ್ 11, 2020) ದಿನಾಂತ್ಯಕ್ಕೆ ಎಸ್ ಬಿಐ ಲೈಫ್ ಷೇರಿನ ದರವು 741.45 ರುಪಾಯಿಗೆ ವ್ಯವಹಾರ ಮುಗಿಸಿದೆ. ಈಗ ಫ್ಲೋರ್ ಬೆಲೆಯನ್ನು 2.2 ಪರ್ಸೆಂಟ್ ರಿಯಾಯಿತಿಗೆ ನಿಗದಿ ಮಾಡಲಾಗಿದೆ. ಷೇರು ಮಾರಾಟಕ್ಕೆ ಸಂಬಂಧಿಸಿದಂತೆ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನೊಮುರಾದಿಂದ ಎಸ್ ಬಿಐಗೆ ಸಲಹೆ ನೀಡುತ್ತಿದೆ.

ಈ ವರ್ಷದ ಆರಂಭದಿಂದ ಇಲ್ಲಿ ತನಕದ ಲೆಕ್ಕ ನೋಡಿದರೆ ಎಸ್ ಬಿಐ ಷೇರು 47 ಪರ್ಸೆಂಟ್, ಎಸ್ ಬಿಐ ಲೈಫ್ 23 ಪರ್ಸೆಂಟ್ ಇಳಿಕೆ ಆಗಿದೆ. ಇನ್ನು ಮಾರ್ಚ್ 16ನೇ ತಾರೀಕು ಸೆನ್ಸೆಕ್ಸ್ ಮುಟ್ಟಿದ್ದ ತಳ ಮಟ್ಟದಿಂದ ಎಸ್ ಬಿಐ 18% ಹಾಗೂ ಎಸ್ ಬಿಐ ಲೈಫ್ 43% ಏರಿಕೆ ಕಂಡಿದೆ.
ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಈ ಬಾರಿ ಮಾರ್ಚ್ 31, 2020ಕ್ಕೆ ಕೊನೆಯಾದ ತ್ರೈ ಮಾಸಿಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭ ನಾಲ್ಕು ಪಟ್ಟು ಏರಿಕೆಯಾಗಿ, 3,580.81 ಕೋಟಿ ದಾಖಲಾಗಿದೆ.


Click it and Unblock the Notifications