ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಮದ್ಯದ ಮೇಲಿನ ನಿರ್ಬಂಧ ತೆರವಾಗಿದ್ದೇ ತಡ ಜನರು ಮುಗಿಬಿದ್ದು, ಕ್ಯೂ ನಿಂತು ಭಾರೀ ಪ್ರಮಾಣದಲ್ಲಿ ಮದ್ಯ ಖರೀದಿಸಿದ್ದಾರೆ. ಕರ್ನಾಟಕದಲ್ಲಿ ಸೋಮವಾರ 45 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಆದರೆ ಎರಡನೇ ದಿನ ಇದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು ಮಂಗಳವಾರ (ಮೇ 05)ರಂದು 197 ಕೋಟಿ ರುಪಾಯಿ ಮೌಲ್ಯದ ಲಿಕ್ಕರ್ ಮಾರಾಟವಾಗಿದೆ.
ನಿರ್ಬಂಧ ತೆರವಿನ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಏರಿಕೆ
ಒಂದೇ ದಿನದಲ್ಲಿ ರಾಜ್ಯವು 197 ಕೋಟಿ ರುಪಾಯಿಗಳ ಮದ್ಯ ಮಾರಾಟವನ್ನು ಗಳಿಸಿದೆ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಹೇಳಿದೆ. ಆದರೆ ಈ ಮೊತ್ತವು ಲಾಕ್‌ಡೌನ್‌ಗೆ ಮುನ್ನ ರಾಜ್ಯದಲ್ಲಿ ದಿನಕ್ಕೆ ಬರುವ ಸರಾಸರಿ ಆದಾಯಕ್ಕಿಂತ 90 ರಿಂದ 95 ಕೋಟಿ ರುಪಾಯಿಗಳಷ್ಟು ಹೆಚ್ಚಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
4.21 ಲಕ್ಷ ಕೇಸ್ ಲಿಕ್ಕರ್ ಮಾರಾಟ
ಮಂಗಳವಾರ, ಭಾರತದಲ್ಲಿ ತಯಾರಾದ ಲಿಕ್ಕರ್‌ನ 4.21 ಲಕ್ಷ ಬಾಕ್ಸಡ್ ಕೇಸ್‌ಗಳ ಮಾರಾಟವನ್ನು ರಾಜ್ಯ ವರದಿ ಮಾಡಿದೆ. ಅಂದರೆ 182 ಕೋಟಿ ರುಪಾಯಿ ಮೌಲ್ಯದ 36.37 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿದೆ. ಇದಲ್ಲದೆ 15 ಕೋಟಿ ರುಪಾಯಿ ಮೌಲ್ಯದ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ.
ಲಿಕ್ಕರ್ ಮಾರಾಟಕ್ಕೆ ನಿಯಮ
ಆಲ್ಕೋಹಾಲ್ ಖರೀದಿಗೆ ನಿರ್ಬಂಧಗಳನ್ನು ಹಾಕಲಾಗಿದೆ. ಚಿಲ್ಲರೆ ಮಾರಾಟ ಮಳಿಗೆಗಳಿಗೆ ಮೂರು ಬಾಟಲಿಗಳ ಆಲ್ಕೋಹಾಲ್ ಮತ್ತು 650 ಎಂಎಲ್ ಆರು ಬಿಯರ್ ಬಾಟಲಿಗಳು ಅಥವಾ ಇದರ ಪ್ರಮಾಣಕ್ಕೆ ಸಮನಾಗಿ ಪ್ರತಿ ವ್ಯಕ್ತಿಗೆ ಸಣ್ಣ ಬಾಟಲಿಗಳನ್ನು ಮಾರಾಟ ಮಾಡಲು ಅವಕಾಶವಿದೆ.
ಜೊತೆಗೆ ಹೆಚ್ಚು ಸೋಂಕು ಕಂಡುಬರದ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ಇದೆ.
ಮುಂದಿನ ದಿನಗಳಲ್ಲಿ ಮಾರಾಟ ಪ್ರಮಾಣ ತಗ್ಗುತ್ತದೆ
ಸೋಮವಾರ ಕರ್ನಾಟಕದಲ್ಲಿ 45 ಕೋಟಿ ರುಪಾಯಿ ಮೌಲ್ಯದ ಲಿಕ್ಕರ್ ಮಾರಾಟವಾಗಿತ್ತು. ಆದರೆ ಇದು ಸರಾಸರಿ ಮಾರಾಟಕ್ಕಿಂತ 50 ಪರ್ಸೆಂಟ್ ಕಡಿಮೆಯಾಗಿದೆ. ರಾಜ್ಯದಲ್ಲಿ ಲಾಕ್‌ಡೌನ್‌ಗೂ ಮೊದಲೇ ದಿನಕ್ಕೆ 90 ಕೋಟಿಯಷ್ಟು ಲಿಕ್ಕರ್ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ 197 ಕೋಟಿ ರುಪಾಯಿ ಮದ್ಯ ಮಾರಾಟವಾಗಿದ್ದು, ಇದು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಅಬಕಾರಿ ಇಲಾಖೆಯ ಐಎಂಎಲ್ ಹೆಚ್ಚುವರಿ ಆಯುಕ್ತ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.


Click it and Unblock the Notifications