ಭಾರತದ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 60,000 ಗಡಿದಾಟಿದ್ದು, ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 325.71 ಪಾಯಿಂಟ್ಸ್ ಏರಿಕೆಗೊಂಡು ಗರಿಷ್ಠ ಪ್ರಮಾಣದ ದಾಖಲೆ ಮಾಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಆಲ್ ಟೈಮ್ ಹೈ ಆಗಿದೆ.
9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 325.71 ಪಾಯಿಂಟ್ಸ್ ಅಥವಾ 0.54% ರಷ್ಟು ಹೆಚ್ಚಾಗಿ 60211.07 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 93.30 ಪಾಯಿಂಟ್ಸ್ ಅಥವಾ ಶೇಕಡಾ 0.52ರಷ್ಟು ಏರಿಕೆಗೊಂಡು 17916.30 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟಿನ ಆರಂಭದಲ್ಲಿ 1293 ಷೇರುಗಳು ಏರಿಕೆಗೊಂಡರೆ, 355 ಷೇರುಗಳು ಕುಸಿದವು ಮತ್ತು 89 ಷೇರುಗಳ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಕೊರೊನಾ ಸಂದರ್ಭದಲ್ಲೂ 60,000 ಗಡಿ ದಾಟಿದೆ!
ಸೆನ್ಸೆಕ್ಸ್ ಕೊರೊನಾ ಸಂದರ್ಭದಲ್ಲೂ 60,000 ಗಡಿ ದಾಟಿ ಮೈಲಿಗಲ್ಲನ್ನು ತಲುಪಿರುವುದು ಸಾಕಷ್ಟು ಸಾಧನೆಯಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಗಾರ ಡಾ. ವಿ ಕೆ ವಿಜಯಕುಮಾರ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಇದುವರೆಗಿನ ಭಾರತದ ಸಾಧನೆ ಅತ್ಯದ್ಭುತವಾಗಿದೆ ಎಂಎಸ್‌ಸಿಐ ವರ್ಲ್ಡ್ ಇಂಡೆಕ್ಸ್ 2.13% ಮತ್ತು ನಿಫ್ಟಿ 4.03% ರಷ್ಟು ಏರಿಕೆಯಾಗಿದೆ.
ಏರಿಕೆಗೊಂಡ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್ ನ ಷೇರು ರೂ. 325.90 ಕ್ಕೆ ಆರಂಭವಾಗಿದ್ದು ಸುಮಾರು 3 ರೂಪಾಯಿಗೂ ಅಧಿಕ ಹೆಚ್ಚಾಗಿದೆ. ಒಎನ್ ಜಿಸಿ ಷೇರು ಸುಮಾರು ರೂ. 2 ಗಳಿಕೆಯೊಂದಿಗೆ ರೂ 139.45 ಕ್ಕೆ ಆರಂಭವಾಯಿತು. ಇನ್ಫೋಸಿಸ್ ಷೇರುಗಳು ರೂ. 25 ರಷ್ಟು ಏರಿಕೆಯಾಗಿ 1,767.95 ರೂ. ತಲುಪಿದೆ. ವಿಪ್ರೋ ಷೇರುಗಳು ರೂ. 684.00 ರಲ್ಲಿ ಆರಂಭವಾಗಿದ್ದು, ಸುಮಾರು ರೂ .10 ಗಳಿಸಿದರೆ, ಲಾರ್ಸೆನ್‌ನ ಷೇರುಗಳು ರೂ .1787.00 ರಲ್ಲಿ ಆರಂಭವಾಗಿದ್ದು, ಸುಮಾರು 17 ರೂಪಾಯಿಗಳ ಲಾಭದೊಂದಿಗೆ ಮುನ್ನೆಡೆದಿದೆ.
ಇಳಿಕೆಗೊಂಡ ಪ್ರಮುಖ ಷೇರುಗಳು:
HUL ಷೇರುಗಳು ರೂ. 22 ರಷ್ಟು ಇಳಿಕೆಯಾಗಿ ರೂ .2,760.10 ಕ್ಕೆ ಆರಂಭವಾಯಿತು. ಟೈಟಾನ್ ಕಂಪನಿಯ ಷೇರುಗಳು ರೂ 13 ರಷ್ಟು ಇಳಿಕೆಯಾಗಿ ರೂ 2,092.10 ರಲ್ಲಿ ಪ್ರಾರಂಭವಾಯಿತು. ಹಿಂಡಾಲ್ಕೊ ಷೇರು ರೂ. 479.90 ಕ್ಕೆ ಆರಂಭವಾಯಿತು. ಶ್ರೀ ಸಿಮೆಂಟ್ ಷೇರುಗಳು ರೂ 146 ಇಳಿಕೆಯಾಗಿ 29,772.90 ಕ್ಕೆ ಪ್ರಾರಂಭವಾಯಿತು. ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ. 673.05 ಕ್ಕೆ ಪ್ರಾರಂಭವಾದವು, ಸುಮಾರು 4 ರೂ. ಕುಸಿದಿದೆ.
ಷೇರು ಖರೀದಿಸುವುದು ಹೇಗೆ?
ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ದಿನದ ವಹಿವಾಟು ಅಂತ್ಯಕ್ಕೆ
ದಿನದ ವಹಿವಾಟು ಅಂತ್ಯದಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 60,000 ಗಡಿದಾಟಿದೆ. 163.11 ಪಾಯಿಂಟ್ಸ್ ಅಥವಾ ಶೇಕಡಾ 0.27ರಷ್ಟು ಏರಿಕೆಗೊಂಡು 60,048.47 ಪಾಯಿಂಟ್ಸ್ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 30.20 ಪಾಯಿಂಟ್ಸ್ ಅಥವಾ ಶೇಕಡಾ 0.17ರಷ್ಟು ಹೆಚ್ಚಾಗಿ 17,853.20 ಪಾಯಿಂಟ್ಸ್ ತಲುಪಿದೆ. ಕಳೆದ ಒಂದು ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 1.5ರಷ್ಟು ಏರಿಕೆಗೊಂಡಿದೆ.


Click it and Unblock the Notifications