ಶೆಮರೂ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಿರೇನ್ ಗಡ ಅವರನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇಲಾಖೆಯು 70.25 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಹಿರೇನ್ ಗಡ ಹೊರತಾಗಿ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅತುಲ್ ಮಾರು ಮತ್ತು ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಹರಿಯಾ ಕೂಡ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಗಾಗಿ ಬಂಧನಕ್ಕೆ ಒಳಗಾಗಿದ್ದಾರೆ. ಶೋಧ ಕಾರ್ಯಾಚರಣೆಯು ಸೆಪ್ಟೆಂಬರ್ 5 ರಂದು ನಡೆದಿದ್ದು, ಇದಾದ ಬಳಿಕ ಮೂರು ಉನ್ನತ- ಶ್ರೇಣಿಯ ಕಾರ್ಯನಿರ್ವಾಹಕರನ್ನು ಬಂಧನ ಮಾಡಲಾಗಿದೆ.

ವೈವಿಧ್ಯಮಯ ಮಾಧ್ಯಮ ಕೊಡುಗೆಗಳಿಗೆ ಹೆಸರುವಾಸಿಯಾದ ಶೆಮರೂ ಎಂಟರ್‌ಟೈನ್‌ಮೆಂಟ್, "ಕಾನೂನನ್ನು ಸರಿಯಾಗಿ ಪಾಲನೆ ಮಾಡದ" ಆರೋಪಗಳನ್ನು ವಿರೋಧ ಮಾಡುವುದಾಗಿ ಹೇಳಿದೆ. ಈ ಹಂತದಲ್ಲಿ, ಕಂಪನಿಯು ತನ್ನ ಕಾರ್ಯಾಚರಣೆಗಳ ಮೇಲೆ ಅಂದಾಜು ಪ್ರಭಾವ ಮತ್ತು ಆಪಾದಿತ ದುಷ್ಕೃತ್ಯದಲ್ಲಿ ಒಳಗೊಂಡಿರುವ ಮೊತ್ತವನ್ನು ಖಚಿತವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದೆ.
ವರದಿಗಳ ಪ್ರಕಾರ, ಹಿರೇನ್ ಗಡ ಮತ್ತು ಅವರ ಸಹಚರರು ಕೋಟ್ಯಂತರ ರೂಪಾಯಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯಲು ವಿವಿಧ ಶೆಲ್ ಸಂಸ್ಥೆಗಳನ್ನು ರಚಿಸಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ ಎಂಬುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಶೆಮರೂ ಪ್ರಸ್ತುತ ಮೂರು ಟಿವಿ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ. ಹಿಂದಿ ಸಾಮಾನ್ಯ ಮನರಂಜನಾ ಚಾನೆಲ್ (ಜಿಇಸಿ) ಶೆಮರೂ ಟಿವಿ, ಹಿಂದಿ ಚಾನೆಲ್ ಆದ ಶೆಮರೂ ಉಮಂಗ್ (ಇದು ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಥೆಗಳನ್ನು ಪ್ರಸಾರ ಮಾಡುತ್ತದೆ), ಕಂಪನಿಯ ಮೊದಲ ಪ್ರಾದೇಶಿಕ ಚಾನೆಲ್ ಶೇಮರೂ ಮರಾಠಿಬಾನಾ ಅನ್ನು ಶೆಮರೂ ನಿರ್ವಹಿಸುತ್ತದೆ.


Click it and Unblock the Notifications