ಕೊರೊನಾವೈರಸ್ ವಿಶ್ವದಲ್ಲಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಜನರು ಮನೆಯಿಂದ ಆಚೆಗೆ ಕಾಲಿಡೋಕು ಮೊದಲು ಯೋಚನೆ ಮಾಡುವಂತಾಗಿದೆ. ಇನ್ನೂ ಶಾಪಿಂಗ್ ಎಲ್ಲಾ ಸದ್ಯಕ್ಕಂತೂ ಇಲ್ಲವೇ ಇಲ್ಲ. ಜೀವ ಬದುಕಿದ್ರೆ ಸಾಕು ಅನ್ನುವಷ್ಟರ ಮಟ್ಟಿಗೆ ಜನರು ಚಿಂತೆಗೀಡಾಗಿದ್ದಾರೆ.
ಲಾಕ್‌ಡೌನ್ ಸ್ಥಿತಿ ನೋಡಿದರೆ ಸದ್ಯಕ್ಕಂತೂ ಯಾವುದೇ ಶಾಪಿಂಗ್ ಮಾಲ್‌ಗಳನ್ನು ಥಿಯೇಟರ್‌ಗಳನ್ನು ಪುನರ್ ಆರಂಭಿಸಲು ಸರ್ಕಾರ ಅನುಮತಿ ನೀಡುವುದು ಅನುಮಾನ. ಹೀಗಿರುವಾಗ ಲಾಕ್‌ಡೌನ್ ಮುಗಿದ ಮೇಲೂ ಜನರು ಮಾಲ್‌ಗಳಿಗೆ ತೆರಳಿ ಶಾಪಿಂಗ್ ಮಾಡುತ್ತಾರೆ ಅನ್ನೋದು ಕೂಡ ಅನುಮಾನ ಹೆಚ್ಚಿಸಿದೆ.
ಲಾಕ್‌ಡೌನ್ ತೆರವಾದರೂ ಜನರು ಮಾಲ್‌ಗಳಿಗೆ ತೆರಳುವುದು ಡೌಟ್
ಹೌದು, ಕೊರೊನಾ ಸೋಂಕು ಹರಡುವುದನ್ನ ತಪ್ಪಿಸಲು ಕರ್ನಾಟಕದಲ್ಲಿ ಮೊದಲು ಬಂದ್ ಮಾಡಿದ್ದೇ ಈ ಶಾಪಿಂಗ್ ಮಾಲ್ ಹಾಗೂ ಥಿಯೇಟರ್‌ಗಳನ್ನು ಅನ್ನೋದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಇದನ್ನೇ ಮೊದಲು ಬಂದ್ ಮಾಡೋಕೆ ಕಾರಣ ಇಲ್ಲಿ ಜನರು ಹೆಚ್ಚಾಗಿ ಒಂದೆಡೆ ಸೇರುವ ಕಾರಣ ಮತ್ತು ಯಾವುದೇ ಸಾಮಾಜಿಕ ಅಂತರ ಇರೋದಿಲ್ಲ ಎಂದು.
ಆದರೆ ಮುಂದಿನ ದಿನಗಳಲ್ಲಿ ಲಾಕ್‌ಡೌನ್ ತೆರವಾದರೂ ಮೊದಲಿನ ಪ್ರಮಾಣದಷ್ಟು ಜನರು ಶಾಪಿಂಗ್ ಮಾಲ್‌ಗಳಿಗೆ ತೆರಳುವುದು ಅನುಮಾನ ಎಂದೇ ಹೇಳಲಾಗ್ತಿದೆ.
ಶಾಪಿಂಗ್ ಮಾಡಲು ಅಪಾಯಿಂಟ್‌ಮೆಂಟ್ ಬೇಕು
ಹೀಗೊಂದು ಯೋಜನೆಯನ್ನು ಸದ್ಯ ಬೃಹತ್ ಶಾಪಿಂಗ್ ಮಾಲ್‌ಗಳ ಆಡಳಿತ ಮಂಡಳಿ ಯೋಚಿಸತೊಡಗಿವೆ. ಶಾಪಿಂಗ್ ಮಾಲ್‌ಗಳಿಗೆ ನಿಮಗೆ ಇಷ್ಟವಾದ ಶಾಪ್‌ಗೆ ತೆರಳಬೇಕು ಎಂದರೆ ಮೊದಲೇ ಆಯಾ ಬ್ರ್ಯಾಂಡ್‌ನ ಮಾರಾಟಗಾರರಿಂದ ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗಬಹುದು. ಜೊತೆಗೆ ವೈಯಕ್ತಿಕವಾದ ರಕ್ಷಣಾತ್ಮಕವಾದ ಮಾಸ್ಕ್ ಅನ್ನು ಧರಿಸಿರಬೇಕು.
ಜನರನ್ನು ಸೆಳೆಯಲು ಈ ತಂತ್ರ
ಕೊರೊನಾ ನಿಂತ್ರು ಜನರಲ್ಲಿ ಅದರ ಭಯವಂತೂ ಸದ್ಯಕ್ಕಂತೂ ದೂರ ಆಗಲ್ಲ. ಹೀಗಾಗಿ ಗ್ರಾಹಕರು ಶಾಪಿಂಗ್ ಮಾಲ್‌ಗೆ ತೆರಳಬೇಕಾದರೆ ಅವು ಸುರಕ್ಷಿತವಾಗಿವೆ ಎಂಬ ಮನೋಭಾವನೆ ಮೂಡಬೇಕಾಗುತ್ತದೆ. ಹೀಗಿರುವಾಗ ಶಾಪಿಂಗ್ ಮಾಲ್‌ಗಳಲ್ಲಿ ನೈರ್ಮಲ್ಯ ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಉತ್ತಮವಾಗಿ ಅನುಸರಿಸಿದರೆ ಗ್ರಾಹಕರನ್ನು ಮರಳಿ ಸೆಳೆಯಬಹುದು ಎಂಬ ಮಾರ್ಗಗಳನ್ನು ರೂಪಿಸುತ್ತಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಸವಾಲಿನ ಕೆಲಸ
ಶಾಪಿಂಗ್ ಮಾಲ್ ಅಂದ್ಮೇಲೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುತ್ತಾರೆ. ಆದರೆ ಲಾಕ್‌ಡೌನ್ ತೆರವಾಗಿ ಶಾಪಿಂಗ್ ಮಾಲ್‌ಗಳನ್ನು ತೆರಯಲು ಅನುಮತಿ ಸಿಕ್ಕರೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಒಂದು ಸವಾಲಿನ ಕೆಲಸವಾಗಿತ್ತದೆ.
ಆದರೆ ಚಿಲ್ಲರೆ ವ್ಯಾಪಾರಿಗಳು ಶಾಪಿಂಗ್ ಮಾಲ್‌ನ ಇತರೆ ಮಳಿಗೆಗಳು ಈ ಮಾನದಂಡಗಳ ಕುರಿತ ಯೋಜನೆಯನ್ನು ಹೆಣೆಯುವುದು ಅನಿವಾರ್ಯವಾಗಿದೆ ಎಂದು ರಿಟೇಲ್, ಫ್ಯಾಬ್ ಇಂಡಿಯಾದ ಅಧ್ಯಕ್ಷ ಅಜಯ್ ಕಪೂರ್ ಹೇಳಿದ್ದಾರೆ.
ಶಾಪ್‌ಗಳಲ್ಲಿ ಸ್ವಚ್ಛತೆಗೆ ನೀಡಬೇಕಿದೆ ಪ್ರಮುಖ ಆದ್ಯತೆ
ಶಾಪಿಂಗ್ ಮಾಲ್ ತೆರವಾದ ಮೇಲೆ ಪ್ರತಿ ಮಳಿಗೆಯು ಕೂಡ ಸ್ಚಚ್ಛತೆಗೆ, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಬಟ್ಟೆ ಬ್ರಾಂಡ್, ಮೊಬೈಲ್ ಶೋ ರೂಂ, ಯಾವುದೇ ಮಳಿಗೆಗಳಲ್ಲಿ ನಿರಂತರವಾಗಿ ಸ್ವಚ್ಛಗೊಳಿಸುವುದು, ಪಾದರಕ್ಷೆಗಳನ್ನು ಮುಚ್ಚುವುದು, ಟ್ರಯಲ್ ರೂಮ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಕ್ಯಾಶ್ ಡೆಸ್ಕ್ ಸೇರಿದಂತೆ ಕೆಲವು ಉಪಕ್ರಮಗಳು ಗ್ರಾಹಕರ ಮುಖಾಮುಖಿಯಾಗಿದ್ದರೆ, ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗಿದೆ. ಜೊತೆಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸದಂತೆ ಸಲಹೆ ಕೂಡ ನೀಡಬೇಕಾಗುತ್ತದೆ.
ಸುರಕ್ಷತೆಯ ವಾತಾವರಣ ನಿರ್ಮಾಣವಾಗಬೇಕು
ಮಾಲ್‌ಗಳು ಮತ್ತು ಮಳಿಗೆಗಳು ಜನರನ್ನು ಮತ್ತೆ ಸೆಳೆಯಲು ಮಾಡಬೇಕಾದ ಪ್ರಮುಖ ವಿಷಯವೆಂದರೆ ಸುರಕ್ಷತೆಯ ವಾತಾವರಣವನ್ನು ಸೃಷ್ಟಿಸುವುದು. ಮಾಲ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಯಾವುದೇ ತೊಂದರೆಯಿಲ್ಲ ಎಂಬ ಸಮಾಧಾನ ಗ್ರಾಹಕರಲ್ಲಿ ಮೂಡುವಂತಾಗಬೇಕು. ಇದು ಹೆಚ್ಚು ಹೆಚ್ಚು ಗ್ರಾಹಕರಲ್ಲಿ ಮನದಟ್ಟಾಗುವಂತೆ ಮಾಡಿದರೆ ವ್ಯವಹಾರವು ಪುನರುಜ್ಜೀವನಗೊಳ್ಳುತ್ತದೆ.


Click it and Unblock the Notifications