ಕೊರೊನಾ ವೈರಾಣು ಭೀತಿಯಿಂದ ಭಾರತೀಯ ಪ್ರವಾಸಿಗರು ತಮ್ಮ ಪ್ರವಾಸಗಳನ್ನು, ಅದರಲ್ಲೂ ಆಗ್ನೇಯ ಏಷ್ಯಾ ದೇಶಗಳ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಆ ಕಾರಣದಿಂದಾಗಿ ಹೆಸರಾಂತ ಪ್ರವಾಸಿ ತಾಣಕ್ಕೆ ತೆರಳುವವರ ಸಂಖ್ಯೆಯಲ್ಲೇ ಇಳಿಮುಖವಾಗಿದೆ. ಒಂದು ವಾರಕ್ಕೆ ಮುಂಚೆ ಬುಕ್ ಮಾಡಿದರೂ ಭಾರತದಿಂದ ಬ್ಯಾಂಕಾಕ್ ಗೆ ಹೋಗಿಬರುವ ಪ್ರಯಾಣ ದರ 9,525ಕ್ಕೆ ಕುಸಿದಿದೆ.
ಫೆಬ್ರವರಿ 26ಕ್ಕೆ ತೆರಳಿ ಮಾರ್ಚ್ 1ರಂದು ವಾಪಸ್ ಬರುವ ದೆಹಲಿ ಮತ್ತು ಬ್ಯಾಂಕಾಕ್ ಮಧ್ಯದ ಪ್ರಯಾಣಕ್ಕೆ NokScootನಿಂದ ಅತ್ಯಂತ ಕಡಿಮೆ ದರದಲ್ಲಿ ಆಫರ್ ನೀಡಲಾಗುತ್ತಿದೆ. ಮೇಕ್ ಮೈ ಟ್ರಿಪ್ ನಲ್ಲಿ ಆನ್ ಲೈನ್ ದರ ಸೂಚಿಸುತ್ತಿರುವಂತೆ ದೆಹಲಿ- ಬ್ಯಾಂಕಾಕ್ ಮಧ್ಯದ ಪ್ರಯಾಣ ದರಕ್ಕೆ ಏರ್ ಇಂಡಿಯಾದಲ್ಲಿ 12,419 ರುಪಾಯಿ ಇದೆ (ಶುಲ್ಕ ಮತ್ತು ಸರ್ ಚಾರ್ಜ್ ಎಲ್ಲ ಒಳಗೊಂಡಂತೆ).
ಇನ್ನು ವಿಮಾನಯಾನ ಸಂಸ್ಥೆಗಳ ಮೂಲದ ಪ್ರಕಾರ, ವಿಯೆಟ್ನಾಂಗೆ ತೆರಳುವ ದರದಲ್ಲಿ 40 ಪರ್ಸೆಂಟ್ ಇಳಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ವಿಯೆಟ್ನಾಂನ ಹೋ ಚಿ ಮಿನ್ ಸಿಟಿ ಹಾಗೂ ಹನೋಯ್ ಗೆ ವಿಮಾನ ಹಾರಾಟವನ್ನು ಆರಂಭಿಸಿದ ಖಾಸಗಿ ವಿಮಾನ ಯಾನ ಸಂಸ್ಥೆ ಇಂಡಿಗೋ. ಅದು ಕೂಡ ಆಗ್ನೇಯ ಏಷ್ಯಾದ ದೇಶಗಳಿಗೆ ವಿಮಾನಗಳ ಹಾರಾಟವನ್ನು ಕಡಿಮೆ ಮಾಡಿದೆ.

ಸದ್ಯಕ್ಕೆ ಕೋಲ್ಕತ್ತಾ- ಹೋ ಚಿನ್ ಮಿನ್ ಸಿಟಿ ಮಧ್ಯ ಥಾಯ್ ಏರ್ ಏಷ್ಯಾದಲ್ಲಿ ಒಂದು ಕಡೆಯ ಪ್ರಯಾಣಕ್ಕೆ 7,773 ರುಪಾಯಿ ಇದೆ. ದೆಹಲಿ- ಕಾಠ್ಮಂಡು ಮಧ್ಯದ ಪ್ರಯಾಣ ಬೇಡಿಕೆ ಕೂಡ ಕಡಿಮೆ ಆಗಿದೆ.
ಅಂದಹಾಗೆ, ಕೊರೊನಾ ವೈರಾಣುವಿನಿಂದ ಚೀನಾ ದೇಶವೊಂದರಲ್ಲೇ 1700 ಮಂದಿ ಸಾವನ್ನಪ್ಪಿದ್ದರೆ, 70,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಚೀನಾ ಹೊರತುಪಡಿಸಿ 25 ರಾಷ್ಟ್ರಗಳಲ್ಲಿ ಕೊರೊನಾ ವೈರಾಣು ಪಾಸಿಟಿವ್ ಕಂಡುಬಂದಿದೆ.
ಏರ್ ಇಂಡಿಯಾ, ಇಂಡಿಗೋ ಎರಡೂ ವಿಮಾನ ಯಾನ ಸಂಸ್ಥೆಗಳು ಚೀನಾ ಮತ್ತು ಹಾಂಕಾಂಗ್ ಗೆ ವಿಮಾನ ಹಾರಾಟವನ್ನು ನಿಲ್ಲಿಸಿವೆ.


Click it and Unblock the Notifications