ದೆಹಲಿಯಲ್ಲಿ ಫೆಬ್ರವರಿ ಎಂಟನೇ ತಾರೀಕಿನಂದು ನಡೆಯುವ ವಿಧಾನಸಭೆ ಚುನಾವಣೆಗೆ ಮತ ಹಾಕಲು ತೆರಳುವವರಿಗೆ "ನೂರಾರು" ಸಂಖ್ಯೆಯಲ್ಲಿ "ಉಚಿತ" ಟಿಕೆಟ್ ನೀಡಲಾಗುವುದು ಎಂದು ಸೋಮವಾರ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ತಿಳಿಸಿದೆ. ಬೇಸ್ ಫೇರ್ (ಮೂಲದರ) ಮನ್ನಾ ಮಾಡಲಾಗುವುದು. ಆದರೆ ತೆರಿಗೆ ಮತ್ತಿತರ ಸರ್ ಚಾರ್ಜ್ ಗಳನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ.
ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡವರನ್ನು ಏರ್ ಲೈನ್ ನ ಆಂತರಿಕ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಹಾಗೆ ಆಯ್ಕೆಯಾದವರು ತೆರಿಗೆ, ಸರ್ ಚಾರ್ಜ್ ಮತ್ತು ಟಿಕೆಟ್ ನ ಇತರ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗುತ್ತದೆ ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.
"ಸ್ಪೈಸ್ ಪ್ರಜಾಪ್ರಭುತ್ವ" ಹೆಸರಿನ ಈ ಅಭಿಯಾನದಲ್ಲಿ ಫೆಬ್ರವರಿ ಎಂಟನೇ ತಾರೀಕು ದೆಹಲಿಗೆ ಕರೆದೊಯ್ದು, ವಾಪಸ್ ಕರೆತರಲಾಗುತ್ತದೆ. ಎರಡೂ ಕಡೆಯ ಟಿಕೆಟ್ ನ ಮೂಲದರವನ್ನು ಮರುಪಾವತಿ ಮಾಡಲಾಗುತ್ತದೆ.

ಒಂದು ವೇಳೆ ಫೆಬ್ರವರಿ ಏಳನೇ ತಾರೀಕಿನಂದು ತೆರಳಿ, ಎಂಟನೇ ತಾರೀಕು ವಾಪಸ್ ಬರುವುದಿದ್ದಲ್ಲಿ ಒಂದು ಕಡೆಯ ಟಿಕೆಟ್ ನ ಮೂಲದರವನ್ನು ಮನ್ನಾ ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ಎಂಟನೇ ತಾರೀಕು ತೆರಳಿ, ಒಂಬತ್ತನೇ ತಾರೀಕಿನಂದು ವಾಪಸ್ ಬರುವಂತಿದ್ದರೂ ಇದೇ ರೀತಿ ಒಂದು ಕಡೆಯ ಮೂಲ ದರವನ್ನು ಮನ್ನಾ ಮಾಡಲಾಗುತ್ತದೆ.
ಜನವರಿ ಮೂವತ್ತೊಂದರಿಂದ ಈ ಅಭಿಯಾನ ಆರಂಭವಾಗಿದ್ದು, ಫೆಬ್ರವರಿ ಐದನೇ ತಾರೀಕಿನ ತನಕ ನೋಂದಣಿಗೆ ಅವಕಾಶ ಇರುತ್ತದೆ. ಆಯ್ಕೆಯಾದವರಿಗೆ ಫೆಬ್ರವರಿ ಆರನೇ ತಾರೀಕು ಮಾಹಿತಿ ನೀಡಿ, ಮೂಲದರವನ್ನು ಮನ್ನಾ ಮಾಡಿ, ಟಿಕೆಟ್ ಬುಕ್ ಮಾಡುವುದಕ್ಕೆ ಆನ್ ಲೈನ್ ಲಿಂಕ್ ನೀಡಲಾಗುತ್ತದೆ.
ಫೆಬ್ರವರಿ ಏಳು ಅಥವಾ ಎಂಟನೇ ತಾರೀಕು ದೆಹಲಿಗೆ ಮತ ಹಾಕಲು ತೆರಳಬೇಕಾಗುತ್ತದೆ. ಆ ನಂತರ ಬೆರಳಿಗೆ ಶಾಯಿ ಹಚ್ಚಿದ್ದನ್ನು ಸೆಲ್ಫಿ ತೆಗೆದು, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಪ್ರೊಫೈಲ್ ನಲ್ಲಿ #SpiceDemocracy ಜತೆ ಅಪ್ ಲೋಡ್ ಮಾಡಬೇಕು.


Click it and Unblock the Notifications