ದೇಶದಾದ್ಯಂತ ಕೊರೊನಾ ಲಾಕ್ ಡೌನ್ ವಿಸ್ತರಣೆ ಆದ ಹಿನ್ನೆಲೆಯಲ್ಲಿ ಮೇ 18ನೇ ತಾರೀಕಿನ ಸೋಮವಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಉಂಟಾಗಿದೆ. ಸೆನ್ಸೆಕ್ಸ್ ಸೂಚ್ಯಂಕ 1068.75 ಪಾಯಿಂಟ್ ಗಳ ಕುಸಿತ ಕಂಡು, 30,028.98 ಅಂಶಗಳೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 313.6 ಪಾಯಿಂಟ್ ಕುಸಿದು, 8823.25 ಅಂಕದೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯವೊಂದನ್ನು ಬಿಟ್ಟು ಉಳಿದೆಲ್ಲ ಸೂಚ್ಯಂಕಗಳು ಕುಸಿದಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ 6 ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡಿದೆ. ಆಟೋ, ಲೋಹ ಮತ್ತು ಮೌಲಸೌಕರ್ಯ ವಲಯದ ಷೇರುಗಳು ಕೂಡ ಕುಸಿದಿವೆ. ಇನ್ನು ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಗಳು 3ರಿಂದ 4 ಪರ್ಸೆಂಟ್ ಇಳಿಕೆ ಕಂಡಿವೆ.
ಒಟ್ಟು 580 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1702 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿವೆ. ಇನ್ನು 159 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್, ಜೀ ಎಂಟರ್ ಟೇನ್ ಮೆಂಟ್, ಐಷರ್ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳು ದೊಡ್ಡ ಮಟ್ಟದಲ್ಲಿ ನಷ್ಟ ಕಂಡವು. ಸಿಪ್ಲಾ, ಟಿಸಿಎಸ್, ಭಾರ್ತಿ ಇನ್ ಫ್ರಾಟೆಲ್, ಇನ್ಫೋಸಿಸ್ ಹಾಗೂ ಐಟಿಸಿ ಷೇರುಗಳು ಏರಿಕೆ ದಾಖಲಿಸಿದವು.


Click it and Unblock the Notifications