ಹೊಸದಾಗಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಹಲವಾರು ಸಂಕಷ್ಟಗಳು ಇದೆ. ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತೀ ಅಪಾಯಕಾರಿಯಾದರೂ ಕೂಡಾ ಹೂಡಿಕೆಯಿಂದ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಇಂದಿನ ಯುವಕರು ತಜ್ಞರ ಅಭಿಪ್ರಾಯವನ್ನು ಪಡೆದು ಸ್ಟಾಕ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಹೂಡಿಕೆಯನ್ನು ಮಾಡುತ್ತಾರೆ. ಆದರೆ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಡಬೇಕು.
ಹಲವಾರು ಮಂದಿ ತಾವು ಹೂಡಿಕೆ ಮಾಡುವಾಗ ಯಾವ ಕಾರ್ಯವನ್ನು ಮಾಡಬಾರದೋ ಅದನ್ನು ಮಾಡುತ್ತಾರೆ. ಹೂಡಿಕೆ ಜ್ಞಾನ ಇಲ್ಲದ ಕಾರಣ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಷೇರುಪೇಟೆಯಲ್ಲಿ ಆರಂಭಿಕವಾಗಿ ಹೂಡಿಕೆ ಮಾಡುವಾಗ ನೀವು ತಿಳಿದಿರಬೇಕಾದ ಅಂಶಗಳ ಬಗ್ಗೆ ಕೆಲವೊಂದು ಟಿಪ್ಸ್‌ಗಳನ್ನು ನಾವಿಲ್ಲಿ ನೀಡಿದ್ದೇವೆ.
ಸ್ಟಾಕ್ ದರ, ಹೂಡಿಕೆ ಬಗ್ಗೆ ಹಲವಾರು ಮಂದಿ ಊಹಾಪೋಹಗಳನ್ನು ಹೊಂದಿದ್ದಾರೆ. ಹಾಗಿರುವಾಗ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನಾವು ಯಾವೆಲ್ಲ ವಿಚಾರವನ್ನು ತಿಳಿದಿರಬೇಕು, ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಬಜೆಟ್ ನಿಗದಿಪಡಿಸಿ, ಸಣ್ಣ ಮೊತ್ತವಾಗಿರಲಿ
ನೀವು ಮೊದಲ ಬಾರಿಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾದರೆ ಬಜೆಟ್ ಅನ್ನು ಮೊದಲೇ ನಿರ್ಧಾರ ಮಾಡಿ. ಹಾಗೆಯೇ ಮೊದಲ ಬಾರಿಗೆ ಹೂಡಿಕೆ ಮಾಡುವಾಗ ಸಣ್ಣ ಪ್ರಮಾಣದ ಮೊತ್ತವನ್ನೇ ಹೂಡಿಕೆ ಮಾಡಿ. ಅಧಿಕ ಮೊತ್ತವನ್ನು ಹೂಡಿಕೆ ಮಾಡದಿರಿ. ಮೊದಲು ಕಡಿಮೆ ಹೂಡಿಕೆ ಮಾಡಿ, ಬಳಿಕ ಮೊತ್ತವನ್ನು ಏರಿಕೆ ಮಾಡುತ್ತಾ ಹೋಗಿ. ನೀವು ಹೂಡಿಕೆಯಲ್ಲಿ ಪರಿಣತಿ ಹೊಂದಿದ ಬಳಿಕ, ಹೂಡಿಕೆ ಮಾಡುವ ಬಗ್ಗೆ ವಿಶ್ವಾಸ ಬಂದ ಬಳಿಕ ಅಧಿಕ ಮೊತ್ತವನ್ನು ಹೂಡಿಕೆ ಮಾಡಿ.
ಹೂಡಿಕೆಗೂ ಮುನ್ನ ರಿಸರ್ಚ್ ಮಾಡಿ
ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ರಿಸರ್ಚ್ ಅನ್ನು ಮಾಡುವುದು ಕೂಡಾ ಮುಖ್ಯವಾಗಿದೆ. ನೀವು ಹೂಡಿಕೆ ಮಾಡುವ ಸಂಸ್ಥೆಯ ಬಗ್ಗೆ ಮೂಲ ವಿಚಾರಗಳನ್ನು ನೀವು ತಿಳಿದಿರಬೇಕಾಗುತ್ತದೆ. ಸಂಸ್ಥೆಯ ಆದಾಯ, ಲಾಭ, ನಿರ್ವಹಣೆ ಮೊದಲಾದವುಗಳು ಬಗ್ಗೆ ಹೂಡಿಕೆ ಮಾಡುವುದಕ್ಕೂ ಮುನ್ನ ತಿಳಿದಿರಬೇಕಾಗುತ್ತದೆ. ಇದು ಅತೀ ಮುಖ್ಯವಾಗಿದೆ. ನೀವು ರಿಸರ್ಚ್ ಅನ್ನು ಮಾಡದಿದ್ದರೆ, ಹೂಡಿಕೆ ಮಾಡಿದ ಮೊತ್ತವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ನಿಮ್ಮಲ್ಲಿರುವ ಲಾಭದ ಮೊತ್ತ ಇದೆಯೇ ನೋಡಿ
ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ನೀವು ಹೂಡಿಕೆ ಮಾಡಲಿರುವ ಮೊತ್ತವು ಲಾಭದ ಮೊತ್ತವಿದಯೇ ಎಂದು ತಿಳಿದಿರಿ. ಜೀವನ ವೆಚ್ಚ, ವಿಮೆ ಪ್ರೀಮಿಯಂ, ಇಎಂಐ ಮೊದಲಾದವುಗಳನ್ನು ಲೆಕ್ಕಾಚಾರ ಮಾಡಿಕೊಳ್ಳಿ. ಎಲ್ಲ ವೆಚ್ಚಗಳು ಕಳೆದ ಬಳಿಕ ನಿಮ್ಮಲ್ಲಿ ಲಾಭದ ಮೊತ್ತ ಉಳಿದರೆ ಮಾತ್ರ ಹೂಡಿಕೆ ಮಾಡಲು ಮುಂದಾಗಿ. ನಿಮ್ಮಲ್ಲಿರುವ ಲಾಭದ ಅಥವಾ ಎಲ್ಲ ಲೆಕ್ಕಾಚಾರದ ಬಳಿಕದ ಮೊತ್ತವನ್ನು ಹೂಡಿಕೆ ಮಾಡಿದರೆ ಮಾತ್ರ ನೀವು ಸುರಕ್ಷಿತರು. ಇಲ್ಲವಾದರೆ ನಿಮ್ಮ ಇತರೆ ಬಜೆಟ್ ಲೆಕ್ಕಾಚಾರದ ಮೇಲೆ ಹೊರೆ ಉಂಟಾಗಲಿದೆ. ಸ್ಟಾಕ್ ಮಾರುಕಟ್ಟೆ ಹೂಡಿಕೆ ಎಂದಿಗೂ ಕೂಡಾ ರಿಸ್ಕ್ ಇನ್‌ವೆಸ್ಟ್‌ಮೆಂಟ್ ಎಂಬುವುದು ತಿಳಿದಿರಲಿ.
ಸ್ಟಾಕ್ ಮಾರುಕಟ್ಟೆ ಬಗ್ಗೆ ನಿಮಗೆ ಶಿಕ್ಷಣವಿರಲಿ
ಮಾಡಿದ ಹೂಡಿಕೆಯಿಂದ ಉತ್ತಮ ರಿಟರ್ನ್ ಪಡೆಯಲು ಬಯಸಿದ್ದರೆ, ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಸ್ಟಾಕ್ ಮಾರುಕಟ್ಟೆಯ ಬಗ್ಗೆ ಶಿಕ್ಷಣವನ್ನು ಹೊಂದಿರುವುದು ಮುಖ್ಯವಾಗುತ್ತದೆ. ಅಂದರೆ ನೀವು ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಎಂದಲ್ಲ. ಸ್ಟಾಕ್ ಮಾರುಕಟ್ಟೆಯ ಬಗ್ಗೆ ಸ್ವಯ ಶಿಕ್ಷಣವನ್ನು ಪಡೆಯುವುದು ಅಗತ್ಯವಾಗಿದೆ. ಇಂಟರ್‌ನೆಟ್‌ನಲ್ಲಿ ಮಾರುಕಟ್ಟೆ ಹೂಡಿಕೆ ಸಂಬಂಧಿತ ಹಲವಾರು ಮಾಹಿತಿಗಳಿದೆ. ನೀವು ಆ ಮೂಲಕ ಶಿಕ್ಷಣವನ್ನು ಪಡೆಯಬಹುದು. ಆದರೆ ಹೂಡಿಕೆಗೂ ಮುನ್ನ ತಜ್ಞರ ಸಲಹೆ ಮುಖ್ಯ.
ಸ್ಟಾಕ್ ಮಾರುಕಟ್ಟೆ ಹೂಡಿಕೆ ವೈವಿಧ್ಯಮಯವಾಗಿರಲಿ
ನಾವು ಮಾಡಿದ ಹೂಡಿಕೆಯಿಂದ ಅಧಿಕ ರಿಟರ್ನ್ ಅನ್ನು ಪಡೆಯಬೇಕಾದರೆ, ನಾವು ಕೇವಲ 2-3 ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿದರೆ ಸಾಕಾಗಲಾರದು. ಅದಕ್ಕಾಗಿ ನೀವು 8-12 ಸ್ಟಾಕ್‌ಗಳ ಪೋರ್ಟ್‌ಪೋಲಿಯೋವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇದರಿಂದ ಉತ್ತಮ ರಿಟರ್ನ್ ಅನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ಹಲವಾರು ಸ್ಟಾಕ್‌ಗಳ ಹೂಡಿಕೆಯಿಂದಾಗಿ ರಿಸ್ಕ್ ಕಡಿಮೆಯಾಗುತ್ತದೆ. ಹಾಗೆಯೇ ಬೇರೆ ಬೇರೆ ರೀತಿಯ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದರೆ ಉತ್ತಮ. ಯಾವುದಾದರೂ ಒಂದರಲ್ಲಿಯಾದರೂ ಲಾಭ ಲಭ್ಯವಾಗಲಿದೆ.


Click it and Unblock the Notifications