ಸಣ್ಣ ಪಟ್ಟಣವೊಂದರಿಂದ ಬಂದು, ಬೆಳೆದು ಎತ್ತರದಲ್ಲಿ ನಿಂತಿರುವ ಸಾಧಕರೊಬ್ಬರ ಜೀವನಗಾಥೆ ಇದು. ಇಂಗ್ಲಿಷ್ ಬರಲ್ಲ, ನಾನು ಓದಿದ್ದು ಕನ್ನಡ ಮೀಡಿಯಂ- ಸರ್ಕಾರಿ ಶಾಲೆ. ಮನೆ ಚಿಕ್ಕದಿತ್ತು. ಹೀಗೆ ಕೆಲವರು ತಮ್ಮ ದುಃಖವನ್ನು ಹೇಳಿಕೊಳ್ಳುವವರು ಸಿಗಬಹುದು. ಆದರೆ 38 ವರ್ಷದ ತುಷಾರ್ ಮಿತ್ತಲ್ ಯಶೋಗಾಥೆ ಓದಿದ ಮೇಲೆ ಅಂಥವರು ಏನನ್ನಬಹುದು? 'ಯುವರ್ ಸ್ಟೋರಿ'ಯಲ್ಲಿ ಬಂದ ಲೇಖನ ಇದು.
ರಾಜಸ್ಥಾನದ ರುದವಾಲ್ ಎಂಬ ಸಣ್ಣ ಪಟ್ಟಣಕ್ಕೆ ಸೇರಿದ ತುಷಾರ್ ಓದಿದ್ದು ಸ್ಥಳೀಯ ಹಳ್ಳಿ ಶಾಲೆಯಲ್ಲಿ. ದಿನಸಿ ಅಂಗಡಿ ನಡೆಸುತ್ತಿದ್ದ ತುಷಾರ್ ಪೋಷಕರಿಗೆ ಆಗಲೇ ಸಾಲ ಇತ್ತು. ಸಂಬಂಧಿಕರು, ಸ್ಥಳೀಯ ಲೇವಾದೇವಿದಾರರು ಹೀಗೆ ಎಲ್ಲರಿಂದ ಸಾಲ ಪಡೆದಿದ್ದ ಅವರ ಮೇಲೆ, ಆ ಸಾಲಗಳನ್ನು ಹಿಂತಿರುಗಿಸಬೇಕಾದ ಒತ್ತಡ ಇತ್ತು.
ಬಾಲಕನಾಗಿದ್ದ ತುಷಾರ್ ಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಒಂದೋ ತನ್ನದೇ ಕುಟುಂಬದ ವ್ಯಾಪಾರ- ವ್ಯವಹಾರದಲ್ಲಿ ಕೈ ಜೋಡಿಸಬೇಕು ಅಥವಾ ಹೆಚ್ಚು ವಿದ್ಯಾಭ್ಯಾಸ ಮಾಡಿ, ಸಾಧನೆ ಕಡೆಗೆ ನೋಡಬೇಕು. ಆದರೆ ತನ್ನ ಕುಟುಂಬದ ಆರ್ಥಿಕ ಸ್ಥಿತಿಯ ಕಾರಣಕ್ಕೆ ತುಷಾರ್ ಮೊದಲಿಗೆ ಆರಿಸಿಕೊಂಡಿದ್ದು ಕಿರಾಣಾ ಅಂಗಡಿಯಲ್ಲಿನ ಕೆಲಸ.
ಇಂಟೀರಿಯರ್ ವ್ಯವಹಾರದಲ್ಲಿ ಅನುಭವ
ಆದರೆ, ತುಷಾರ್ ತನ್ನ ಕನಸು ಬಿಡಲಿಲ್ಲ. ಓದಬೇಕು, ಓದಬೇಕು ಎಂಬುದು ನಿತ್ಯದ ತಪನೆ ಆಗಿತ್ತು. ಅಂತೂ ಸಂಬಂಧಿಕರೊಬ್ಬರ ಮಾತಿನಿಂದ ಮತ್ತೂ ಪ್ರೇರಣೆ ಪಡೆದ ತುಷಾರ್, ಎಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಊರು ಬಿಟ್ಟರು. 22 ಸಾವಿರ ರುಪಾಯಿ ನಗದು, ಆರ್ಕಿಟೆಕ್ಚರಲ್ ಸಂಸ್ಥೆಯೊಂದರಲ್ಲಿ ಟೆಂಪರರಿ ಕೆಲಸದೊಂದಿಗೆ ಹದಿನೇಳು ವರ್ಷದ ತುಷಾರ್ ತನ್ನ ಓದಿಗೆ ಹಣ ಕೂಡ ಹೊಂದಿಸಿಕೊಳ್ಳತೊಡಗಿದರು. ಆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರಿಂದ ಇಂಟೀರಿಯರ್ ವ್ಯವಹಾರದಲ್ಲಿ ಅನುಭವ ದಕ್ಕುತ್ತಾ ಹೋಯಿತು. ಆ ನಂತರ ತನ್ನದೇ ಸ್ವಂತ ಕಂಪೆನಿ ಶುರು ಮಾಡಲು ಮುಂದಾದಾಗ ಸಹಾಯ ಆಯಿತು. ತುಷಾರ್ ಇದ್ದ ಹಳ್ಳಿಯಲ್ಲಿ ಶೈಕ್ಷಣಿಕ ಸಾಲ ಪಡೆದ ಮೊದಲ ವ್ಯಕ್ತಿ ಅವರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಸಿಕ್ಕಿತ್ತು. ಅದಕ್ಕೆ ಯಾವುದೇ ಶ್ಯೂರಿಟಿ ನೀಡಿರಲಿಲ್ಲ. ಬ್ಯಾಂಕ್ ನ ವಲಯ ಮಟ್ಟದ ಮ್ಯಾನೇಜರ್ ತನಗೆ ನೆರವಾಗಿದ್ದನ್ನು ತುಷಾರ್ ನೆನಪಿಸಿಕೊಳ್ಳುತ್ತಾರೆ. ಎನ್ ಐಸಿಎಂಎಆರ್ ನಲ್ಲಿ ಕನ್ ಸ್ಟ್ರಕ್ಷನ್ ಮ್ಯಾನೇಜ್ ಮೆಂಟ್ ನಲ್ಲಿ ಪಿಜಿಡಿಎಂ ಹಾಗೂ ಬಿ.ಇ., (ಸಿವಿಲ್) ಪೂರ್ಣ ಮಾಡುವ ತುಷಾರ್ ಡಿಎಲ್ ಎಫ್ ನಲ್ಲಿ ಉದ್ಯೋಗ ಹಿಡಿಯುತ್ತಾರೆ.
12 ಸಾವಿರ ರುಪಾಯಿ ಬಂಡವಾಳ
ಆ ನಂತರ ಒಂದು ವರ್ಷಕ್ಕೆ ಸ್ವತಂತ್ರ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಶುರು ಮಾಡುತ್ತಾರೆ. 2009ರಲ್ಲಿ ಗುರುಗ್ರಾಮದಲ್ಲಿ ಸ್ಟುಡಿಯೋಕಾನ್ ವೆಂಚರ್ಸ್ (ಎಸ್ ಕೆವಿ) ಆರಂಭ ಮಾಡುತ್ತಾರೆ. ಅದು ಎಷ್ಟು ಮೊತ್ತದೊಂದಿಗೆ ಗೊತ್ತಾ? ಕೇವಲ 12 ಸಾವಿರ ರುಪಾಯಿಯೊಂದಿಗೆ. ಡಿಎಲ್ ಎಫ್ ನಲ್ಲಿ ಕೆಲಸ ಮಾಡುವ ವೇಳೆ ಅವರು ಉಳಿತಾಯ ಮಾಡಿದ್ದ ಹಣ ಅದು. ಅಲ್ಲಿಂದ ಮುಂದೆ ಹನ್ನೊಂದು ವರ್ಷಗಳ ಕಾಲ ಹೊರಗಿಂದ ಎಲ್ಲೂ ಸಾಲ ಪಡೆದಿಲ್ಲ ತುಷಾರ್. ಇಂದಿಗೆ ಎಸ್ ಕೆವಿಯನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಿದ್ದಾರೆ. 200 ಕೋಟಿ ವಹಿವಾಟು ನಡೆಸುತ್ತದೆ ಕಂಪೆನಿ. 250ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಸ್ಟುಡಿಯೋಕಾನ್ ವೆಂಚರ್ಸ್ ನಿಂದ ಅಮೆಜಾನ್, ಗೂಗಲ್, ಜೆಡ್ ಎಸ್, ಬ್ರಿಟಿಷ್ ಕೌನ್ಸಿಲ್, ಅಡಿಡಾಸ್, ಪೆಪ್ಸಿಕೋ, ಎನ್ ಟಿಟಿ, ಡಿಎಲ್ ಎಫ್ ಹೀಗೆ ಇನ್ನೂರಕ್ಕೂ ಹೆಚ್ಚು ಗ್ರಾಹಕರಿಗೆ ಇಂಟೀರಿಯರ್ ಮಾಡಿಕೊಡಲಾಗಿದೆ ಎನ್ನುತ್ತಾರೆ ತುಷಾರ್. ಹಾಗಂತ ಎಲ್ಲವೂ ಸಲೀಸಾಗಿ ನಡೆದುಹೋಗಿದೆ ಅಂತಲ್ಲ.
ಹಣಕಾಸಿನ ಮುಗ್ಗಟ್ಟು ಎದುರಿಸಲು ಗ್ರಾಹಕರ ಬೆಂಬಲ
ಸಶಕ್ತವಾದ ತಂಡವೊಂದನ್ನು ಕಟ್ಟುವುದಕ್ಕೆ ತುಷಾರ್ ಬಹಳ ಶ್ರಮಿಸಿದ್ದಾರೆ. ಎಸ್ ಕೆವಿಗೆ ಸೇರಿದ ಎಂಬತ್ತು ಸಾವಿರ ಚದರಡಿಯ ಕಾರ್ಖಾನೆ ಮಾನೇಸರ್ ನಲ್ಲಿ ಇದೆ. ಅಲ್ಲಿ ಇಂಟೀರಿಯರ್ ಪ್ರಾಜೆಕ್ಟ್ ಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ತುಷಾರ್ ಕಂಪೆನಿ ಆರಂಭಿಸಿದ ಮೇಲೆ ದೊರೆತ ಮೊದಲ ಫಾರ್ಚೂನ್ 500 ಗ್ರಾಹಕ ಪಟ್ಟಿಯ ಕಂಪೆನಿ ಅಂದರೆ ಎಮರ್ಸನ್. ಅಲ್ಲಿಂದ ಆರಂಭವಾಗಿದ್ದು ಇತರ ಫಾರ್ಚೂನ್ 500 ಕಂಪೆನಿಗಳಿಗಾಗಿಯೂ ಇಂಟೀರಿಯರ್ ಮಾಡಿಕೊಡಲಾಗಿದೆ. 2012ರಲ್ಲಿ ಕಂಪೆನಿ ಎದುರಿಸಿದ ಹಣಕಾಸಿನ ಮುಗ್ಗಟ್ಟನ್ನು ದಾಟಲು ಹೇಗೆ ಗ್ರಾಹಕರು, ಜತೆಯಲ್ಲಿ ಕೆಲಸ ಮಾಡುವವರು ಮಾನಸಿಕ ಸ್ಥೈರ್ಯ ತುಂಬಿದರು ಎಂಬುದನ್ನು ಸಹ ಮನಸಾರೆ ಅವರು ಸ್ಮರಿಸುತ್ತಾರೆ. 2017ರಲ್ಲಿ ಕೂಡ ಆರ್ಥಿಕ ಸಮಸ್ಯೆಯನ್ನು ಮೀರಲು ಕಂಪೆನಿಯ ಗ್ರಾಹಕರ ಬೆಂಬಲವೇ ನೆರವಾಯಿತು ಎಂದು ಹೇಳುತ್ತಾರೆ.
ಕೊರೊನಾದ ಸವಾಲು ಎದುರಾಗಿದೆ
ಎಸ್ ಕೆವಿಗೆ ವಿದೇಶಿ ಕಂಪೆನಿಗಳು ಹಾಗೂ ದೇಶೀ ಕಂಪೆನಿಗಳಿಂದ ಸ್ಪರ್ಧೆ ಇದ್ದೇ ಇದೆ. ಆದರೆ ನಮ್ಮ ಕಂಪೆನಿಯಿಂದ ಸಂಪನ್ಮೂಲಕ್ಕೆ ಹಾಗೂ ಮೂಲಸೌಕರ್ಯಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದೇವೆ. ಆ ಕಾರಣಕ್ಕೆ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ತುಷಾರ್. ಎಸ್ ಕೆವಿ ಆರಂಭವಾದದ್ದು ಇಂಟೀರಿಯರ್ ಡಿಸೈನ್ ಹಾಗೂ ಸೇವೆ ಒದಗಿಸುವ ಕಂಪೆನಿಯಾಗಿಯೇ. ಆದರೆ ಆ ನಂತರ ಪೀಠೋಪಕರಣದ ವಿಭಾಗಕ್ಕೂ ಕಾಲಿರಿಸಿತು. ಇಂಟೀರಿಯರ್ ಡಿಸೈನ್ ನಲ್ಲಿ ತಂತ್ರಜ್ಞಾನ ಅಳವಡಿಕೆ ಮಹತ್ವವನ್ನು ತಿಳಿದಿರುವ ತುಷಾರ್ ಗೆ, ಯುವಜನರ ಅಗತ್ಯಗಳು ತುಂಬಾ ಚೆನ್ನಾಗಿ ಗೊತ್ತು. ಈಗಿನ ಕೊರೊನಾದ ಪರಿಣಾಮ ಎಸ್ ಕೆವಿಗೂ ಆಗಿದೆ. ಈಗಾಗಲೇ ತುಷಾರ್ ಮನಸ್ಸಿನಲ್ಲಿ ಕೊರೊನಾ ನಂತರದ ದಿನಗಳಿಗೆ ಹೇಗೆ ಸಿದ್ಧವಾಗಬೇಕು ಎಂಬ ಯೋಜನೆ ರೂಪುಗೊಳ್ಳುತ್ತಿದೆ. ಮುಂದಿನ ದಿನಗಳ ಅವಕಾಶಗಳಿಗೆ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ತುಷಾರ್.


Click it and Unblock the Notifications