ಮುಂಬೈ, ಮೇ 25: ಕೇಂದ್ರ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. ಈ ಸುದ್ದಿ ಬೆನ್ನಲ್ಲೇ ಸಕ್ಕರೆ ಕಂಪನಿಗಳ ಷೇರುಗಳು ನೆಲಕಚ್ಚಿವೆ. ಪ್ರಮುಖ ಕಂಪನಿಗಳ ಷೇರುಗಳು ಶೇ 10ರಷ್ಟು ಕುಸಿತ ಕಂಡಿವೆ.
ಪ್ರಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಲಾಗಿದೆ.
ಇಂಧನ ಮೇಲಿನ ಸುಂಕ ಇಳಿಕೆ, ಉಕ್ಕು ರಫ್ತು ಮೇಲಿನ ನಿಯಂತ್ರಣ, ಗೋಧಿ ರಫ್ತು ನಿರ್ಬಂಧ ಮುಂತಾದ ಕ್ರಮಗಳನ್ನು ಜಾರಿಗೆ ತಂದು ಹಣದುಬ್ಬರ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಎನ್ಎಸ್ಇಯಲ್ಲಿ ಬಲರಾಮ್ ಪುರ್ ಚಿನ್ನಿ ಮಿಲ್ಸ್ ಶೇ 8.85ರಷ್ಟು ಕುಸಿತ ಕಂಡಿದೆ. ಉಗರ್ ಶುಗರ್ ಶೆ 4.98ರಷ್ಟು, ಅವಧ್ ಶುಗರ್ ಶೇ 8ರಷ್ಟು, ದ್ವಾರಿಕೇಶ್ ಶುಗರ್ ಶೇ 9.60 ರಷ್ಟು, ರೇಣುಕಾ ಶುಗರ್ ಶೇ 10ರಷ್ಟು ಹಾಗೂ ಧಮಂಪುರ್ ಶುಗರ್ ಶೇ 5ರಷ್ಟು ಕುಸಿತ ಕಂಡಿವೆ.
2021-22 ರ ಸಕ್ಕರೆ ಉತ್ಪಾದನೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ದೇಶದಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತುಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
2021-22 ರ ಸಕ್ಕರೆ ಉತ್ಪಾದನೆ ಋತುವಿನಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 100 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಸಕ್ಕರೆ ರಫ್ತು ಮಾಡಲು ಸರ್ಕಾರವು ನಿರ್ಧರಿಸಿದೆ. ಡಿಜಿಎಫ್‌ಟಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2022 ರಿಂದ ಅಕ್ಟೋಬರ್ 31, 2022 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ನಿರ್ಬಂಧ ಇರಲಿದೆ.
ಪ್ರಸಕ್ತ ವರ್ಷದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಉತ್ಪಾದಕ ಮತ್ತು ಎರಡನೇ ಅತಿ ದೊಡ್ಡ ಸಕ್ಕರೆ ರಫ್ತುದಾರ ದೇಶವಾಗಿದೆ. ಸರ್ಕಾರದ ನಿಯಮಿತ ಪ್ರಯತ್ನದ ಫಲವಾಗಿ ಕಳೆದ 2020-21ನೇ ಸಾಲಿನ ಸಕ್ಕರೆ ಹಂಗಾಮಿನ ಶೇ.99.5ರಷ್ಟು ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ. 2021-22ನೇ ಸಾಲಿನ ಕಬ್ಬಿನ ಬಾಕಿಯ ಶೇ.85ರಷ್ಟು ಹಣವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಸಕ್ಕರೆಯ ಸಗಟು ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ 3,150-3,500 ರೂಗಳ ವ್ಯಾಪ್ತಿಯಲ್ಲಿರುತ್ತವೆ. ಚಿಲ್ಲರೆ ಬೆಲೆಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿ ಕಿಲೋಗ್ರಾಂಗೆ ರೂ 36-44 ರ ವ್ಯಾಪ್ತಿಯಲ್ಲಿದೆ ಎಂದು ಕೂಡಾ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ರಫ್ತು ಪ್ರಮಾಣ: 2021-22ರಲ್ಲಿ ರಫ್ತು ಪ್ರಮಾಣ 4.6 ಬಿಲಿಯನ್ ಡಾಲರ್ (ಸುಮಾರು 35,000 ಕೋಟಿ ರು) ಗೇರಿದೆ. 2013-14ರಲ್ಲಿ 1,17 ಬಿಲಿಯನ್ ಡಾಲರ್ (9,000 ಕೋಟಿ ರು ) ನಷ್ಟಿತ್ತು. 121 ದೇಶಗಳಿಗೆ ಸಕ್ಕರೆ ರಫ್ತು ಮಾಡಲಾಗುತ್ತಿದೆ.


Click it and Unblock the Notifications