ಭಾರತೀಯ ರೈಲ್ವೇ ಇಲಾಖೆ (Indian Railways) ಪ್ರಯಾಣಿಕರಿಗಾಗಿ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿರುತ್ತದೆ. ಅದೇ ರೀತಿ ಇದೀಗ ಕರ್ನಾಟಕ ಮತ್ತು ಮಹಾರಾಷ್ಟ್ರ (Karnataka-Maharashtra) ಪ್ರಯಾಣಿಕರಿಗಾಗಿ ರೈಲ್ವೇ ಇಲಾಖೆ ಗುಡ್‌ನ್ಯೂಸ್ ಕೊಟ್ಟಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ, ರೈಲ್ವೆ ಮಂಡಳಿಯು SMVT ಬೆಂಗಳೂರು ಮತ್ತು ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ನಡುವೆ ಹೊಸ ಎರಡು ವಾರಕ್ಕೊಮ್ಮೆ ರೈಲು ಸೇವೆ ನೀಡಲು ಅನುಮೋದನೆ ನೀಡಿದೆ. ಈ ಹೊಸ ಸೇವೆ ಆಗಾಗ ಕರ್ನಾಟಕ-ಮಹಾರಾಷ್ಟ್ರ ಪ್ರಯಾಣಿಸುವವರಿಗೆ ವಿಶೇಷವಾಗಿ ಅನುಕೂಲವಾಗಲಿದೆ.
ರೈಲು ಸೇವೆಯ ಸಮಯ:
ಅನುಮೋದನೆ ನೀಡಿದ ವೇಳಾಪಟ್ಟಿಯ ಪ್ರಕಾರ, 16553 ಸಂಖ್ಯೆಯ ಈ ರೈಲು SMVT ಬೆಂಗಳೂರಿನಿಂದ ರಾತ್ರಿ 8:35ಕ್ಕೆ ಹೊರಟು, ಮರುದಿನ ರಾತ್ರಿ 8:40ಕ್ಕೆ ಮುಂಬೈನ LTT ತಲುಪಲಿದೆ. ಒಟ್ಟು ಪ್ರಯಾಣದ ಅವಧಿ ಸುಮಾರು 24 ಗಂಟೆಗಳು.
ಇನ್ನು ಇದೇ ರೈಲು ಮರಳಿ LTTಯಿಂದ ರಾತ್ರಿ 11:15ಕ್ಕೆ ಹೊರಡುವ ರೈಲು, ಮರುದಿನ ರಾತ್ರಿ 10:30ಕ್ಕೆ SMVT ಬೆಂಗಳೂರು ತಲುಪಲಿದೆ. ಇದು ಪ್ರಯಾಣಿಕರಿಗೆ ರಾತ್ರಿಯಿಡೀ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವುದಲ್ಲದೇ, ಉತ್ತಮ ಸೇವೆ ನೀಡುವುದು ಇದರ ಉದ್ದೇಶವಾಗಿದೆ.
SMVT ಬೆಂಗಳೂರು ರೈಲ್ವೇ ಸ್ಟೇಷನ್‌ನಿಂದ ಈ ರೈಲು ಪ್ರತಿ ಶನಿವಾರ ಮತ್ತು ಮಂಗಳವಾರ ಸಂಚಾರ ಪ್ರಾರಂಭಿಸಲಿದೆ.
ಇನ್ನು LTT ಮುಂಬೈ ರೈಲ್ವೇ ಸ್ಟೇಷನ್‌ನಿಂದ ಮರಳುವ ರೈಲುಗಳು ಭಾನುವಾರ ಮತ್ತು ಬುಧವಾರದಂದು ಲಭ್ಯವಿರುತ್ತವೆ. ಈ ರೈಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಮುಖ ನಗರ ಹಾಗೂ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಹತ್ತು ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಎಲ್ಲೆಲ್ಲಾ ನಿಲ್ಲುತ್ತದೆ?
ನಿಲುಗಡೆ ನಿಲ್ದಾಣಗಳೆಂದರೆ, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಾಜ್, ಸಾಂಗ್ಲಿ, ಕರಾಡ್, ಸತಾರ, ಲೋನಾಂಡ್, ಪುಣೆ, ಲೋನಾವಲಾ, ಕರ್ಜತ್, ಕಲ್ಯಾಣ್ ಮತ್ತು ಥಾಣೆ ಸೇರಿವೆ. 17 ಆಧುನಿಕ ಎಲ್.ಹೆಚ್.ಬಿ (LHB) ಬೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಈ ರೈಲು ಸೇವೆ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಸೂಕ್ತವಾಗಿದೆ.
ರೈಲ್ವೇ ಇಲಾಖೆಯ ಈ ಹೊಸ ಅನುಮೋದನೆಯಿಂದ, ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವವರಿಗೆ ಮತ್ತಷ್ಟು ಅನುಕೂಲವಾಗಲಿದೆ. ಈ ವಿಶೇಷ ರೈಲುಗಳು ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುವ ಜೊತೆಗೆ, ದೂರದ ಪ್ರಯಾಣ ಮಾಡುವವರಿಗೆ ಉತ್ತಮ ಅವಕಾಶ ನೀಡಲಿದೆ. ರೈಲ್ವೇ ಮಂಡಳಿಯು SMVT ಬೆಂಗಳೂರು ಮತ್ತು LTT ಮುಂಬೈ ನಡುವೆ ವಾರಕ್ಕೆ ಎರಡು ಬಾರಿ ಸೂಪರ್‌ಫಾಸ್ಟ್ ರೈಲು ಸಂಚರಿಸಲಿದೆ ಎಂದು ಪ್ರಕಟಿಸಿದೆ.
ರೈಲ್ವೇ ಇಲಾಖೆಯ ಈ ನಿರ್ಧಾರದಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಲ್ಲದೇ ಕರ್ನಾಟಕದಿಂದ ಮುಂಬೈಗೆ ದೂರದ ಪ್ರಯಾಣ ಬೆಳೆಸುವವರಿಗೆ ಬಹಳಷ್ಟು ಸಹಕಾರಿಯಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿಗರು, ಕರ್ನಾಟಕದವರು ಮಹಾರಾಷ್ಟ್ರ, ಮುಂಬೈ ತೆರಳಬೇಕೆಂದುಕೊಂಡವರು ಈ ಸೂಪರ್ ಫಾಸ್ಟ್ ರೈಲನ್ನು ಆಯ್ಕೆ ಮಾಡಬಹುದು.


Click it and Unblock the Notifications