EMI ವಿನಾಯಿತಿ: ಬಡ್ಡಿ ಪಾವತಿಯಲ್ಲಿ ಸರ್ಕಾರದ ಜವಾಬ್ದಾರಿ ಪ್ರಶ್ನಿಸಿದ 'ಸುಪ್ರೀಂ'
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಘೋಷಿಸಲಾದ ಇಎಂಐ ವಿನಾಯಿತಿ, ಸಾಲದ ಮೇಲಿನ ಬಡ್ಡಿ ಮನ್ನಾ ಹಾಗೂ ಬಡ್ಡಿಯ ಮೇಲೆ ಬಡ್ಡಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ವ್ಯವಹಾರ- ವ್ಯಾಪಾರ ಹಾಗೂ ಜನರ ನೋವುಗಳ ಬಗ್ಗೆ ಮಾತ್ರ ನಿಮಗೆ ಆಸಕ್ತಿ ಇದ್ದರೆ ಸಾಲದು ಎಂದು ಕೋರ್ಟ್ ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಈ ವಿಷಯವಾಗಿ ತೆಗೆದುಕೊಂಡ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರ ಅವಿತಿಟ್ಟುಕೊಳ್ಳುತ್ತಿದೆ. ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಸರ್ಕಾರಕ್ಕೆ ಅಪಾರ ಪ್ರಮಾಣದ ಅಧಿಕಾರ ಇದೆ. ಇಎಂಐ ವಿನಾಯಿತಿ ಮೇಲೆ ಬ್ಯಾಂಕ್ ಗಳು ಬಡ್ಡಿ ವಿಧಿಸುವುದನ್ನು ಅದರ ಅಡಿಯಲ್ಲಿ ಸರ್ಕಾರವು ನಿರ್ಧಾರ ಮಾಡಬಹುದಿತ್ತು ಎಂದಿದೆ.

ಎಲ್ಲರಿಗೂ ಅನ್ವಯ ಆಗುವ ಪರಿಹಾರ ಸಾಧ್ಯವಿಲ್ಲ
ಈ ವಿನಾಯಿತಿ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ಹಾಕುವುದನ್ನು ನಿಲ್ಲಿಸಬೇಕಿತ್ತು ಎಂದು ಕೋರ್ಟ್ ಹೇಳಿದೆ. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಗೆ ಹಾಜರಾದರು. "ಎಲ್ಲರಿಗೂ ಅನ್ವಯ ಆಗುವಂತೆ ಒಂದು ಪರಿಹಾರವನ್ನು ಈ ವಿಷಯದಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಒತ್ತಡದಲ್ಲಿರುವ ಖಾತೆಗಳನ್ನು ಗುರುತಿಸಿ, ಅಂಥವರಿಗೆ ಬಡ್ಡಿ ದರ ಕಡಿಮೆ ಮಾಡಲಾಗುವುದು" ಎಂದಿದ್ದಾರೆ.

ಸರ್ಕಾರ ಮಾಡಿದ ಲಾಕ್ ಡೌನ್ ಘೋಷಣೆಯಿಂದ ಸಮಸ್ಯೆ
ಈಗಿನ ಸಮಸ್ಯೆ ಉದ್ಭವಿಸಿರುವುದು ಸರ್ಕಾರ ಘೋಷಣೆ ಮಾಡಿದ ಲಾಕ್ ಡೌನ್ ನಿಂದ. ಆ ಕಾರಣಕ್ಕೆ ಈ ವಿಚಾರದಲ್ಲಿ ಸರ್ಕಾರದ ಪಾತ್ರ ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬಗ್ಗೆ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ದಾಖಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವಿಷಯವಾಗಿ ಮುಂದಿನ ವಿಚಾರಣೆ ಸೆಪ್ಟೆಂಬರ್ 1ಕ್ಕೆ ನಿಗದಿ ಆಗಿದೆ.

ಸಾಲದ ಇಎಂಐ ವಿನಾಯಿತಿ ಘೋಷಿಸಿದ ಉದ್ದೇಶವೇ ವಿಫಲ
ಕೊರೊನಾ ಕಾರಣಕ್ಕೆ ಆರು ತಿಂಗಳ ಅವಧಿಗೆ ಸಾಲದ ಮೇಲಿನ ಇಎಂಐ ಪಾವತಿಯಿಂದ ಬ್ಯಾಂಕ್ ಗಳಿಂದ ವಿನಾಯಿತಿ ಘೋಷಿಸಿತು ಆರ್ ಬಿಐ. ಆದರೆ ಈ ಅವಧಿಯಲ್ಲಿ ಅಸಲು ಹಾಗೂ ಬಡ್ಡಿ ಮೇಲೆ ಬಡ್ಡಿ ವಿಧಿಸುವುದರಿಂದ ಯಾವುದೇ ವಿನಾಯಿತಿ ಇಲ್ಲ ಎನ್ನಲಾಗಿತ್ತು. ಕೊರೊನಾದ ಸಮಸ್ಯೆ ನಿವಾರಣೆಗಾಗಿಯೇ ಈ ವಿನಾಯಿತಿ ಘೋಷಿಸಿದ ಮೇಲೆ ಇಎಂಐ ಮೇಲೆ ಬಡ್ಡಿಗೂ ಅನ್ವಯಿಸಬೇಕು ಎಂದು ಅರ್ಜಿ ಹಾಕಿಕೊಳ್ಳಲಾಗಿತ್ತು.

ಗ್ರಾಹಕರ ಜೀವ ಹಾಗೂ ಜೀವನದ ಹಕ್ಕು ಕಸಿದಂತಾಗುತ್ತದೆ
ಆದಾಯ ನಷ್ಟವಾಗಿ ಇಎಂಐ ಕಟ್ಟುವ ಸ್ಥಿತಿಯಲ್ಲೇ ಇಲ್ಲದವರು ಬಡ್ಡಿ ಹಾಗೂ ಆ ಬಡ್ಡಿಯ ಮೇಲೆ ಬಡ್ಡಿ ಕಟ್ಟುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಬಡ್ಡಿಯ ಭಾರದಿಂದ ಜೀವ ಹಾಗೂ ಜೀವನದ ಹಕ್ಕು ಕಸಿದಂತಾಗುತ್ತಿದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು. ಇಂಥ ಬಡ್ಡಿಯ ಹೊರೆಯು ಗ್ರಾಹಕರಿಗೆ ನೀಡಿದ ವಿನಾಯಿತಿ ಅನುಕೂಲದ ಉದ್ದೇಶವೇ ಸೋಲುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.