ಐ.ಟಿ. ದಿಗ್ಗಜ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 16,000 ಕೋಟಿ ರುಪಾಯಿ ಮೊತ್ತದ ಷೇರುಗಳ ಬೈಬ್ಯಾಕ್ ಮಾಡುವುದಾಗಿ ಬುಧವಾರ ಘೋಷಣೆ ಮಾಡಿದೆ. 5,33,33,333 ಈಕ್ವಿಟಿ ಷೇರುಗಳನ್ನು ಹದಿನಾರು ಸಾವಿರ ಕೋಟಿ ರುಪಾಯಿ ಮೀರದಂತೆ ಕಂಪೆನಿಯೇ ಮರು ಖರೀದಿ ಮಾಡಲಿದೆ. ಟಿಸಿಎಸ್ ನಿಂದ 3000 ರುಪಾಯಿಗೆ ಷೇರು ಬೈ ಬ್ಯಾಕ್ ಮಾಡಲು ಪ್ರಸ್ತಾವ ಇರಿಸಲಾಯಿತು. ಇನ್ನು ಪ್ರತಿ ಷೇರಿಗೆ 12 ರುಪಾಯಿಯಂತೆ ಮಧ್ಯಂತರ ಲಾಭಾಂಶ (ಡಿವಿಡೆಂಡ್) ಘೋಷಿಸಲಾಗಿದೆ.
ಬುಧವಾರದ ದಿನದ ಕೊನೆಗೆ ಟಿಸಿಎಸ್ ಕಂಪೆನಿಯ ಪ್ರತಿ ಷೇರಿನ ಮುಕ್ತಾಯದ ಬೆಲೆ 2,737 ರುಪಾಯಿ ಇದೆ. 2018ರಲ್ಲಿ ಮುಂಬೈ ಮೂಲದ ಟಿಸಿಎಸ್ ನಿಂದ 16 ಸಾವಿರ ಕೋಟಿ ರುಪಾಯಿ ತನಕ ಷೇರು ಬೈ ಬ್ಯಾಕ್ ಮಾಡಲಾಗಿತ್ತು. ಪ್ರತಿ ಷೇರಿಗೆ 2,100 ರುಪಾಯಿಯಂತೆ ಪಾವತಿಸಿ, ಹಿಂಪಡೆಯಲಾಗಿತ್ತು.
ಬಹುತೇಕ ಐಟಿ ಕಂಪೆನಿಗಳ ಲೆಕ್ಕದ ಪುಸ್ತಕಗಳ ಪ್ರಕಾರ ಹೆಚ್ಚುವರಿಯಾಗಿ ನಗದು ಇದೆ. ಇದನ್ನು ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ನೀಡಬಹುದು ಅಥವಾ ಬೈಬ್ಯಾಕ್ ರೂಪದಲ್ಲಿ ಮರಳಿಸಬಹುದು ಎಂದು ಏಂಜೆಲ್ ಬ್ರೋಕಿಂಗ್ ಲಿಮಿಟೆಡ್ ನ ಡಿವಿಪಿ- ಈಕ್ವಿಟಿ ಸ್ಟ್ರಾಟೆಜಿಸ್ಟ್ ಜ್ಯೋತಿ ರಾಯ್ ಅಭಿಪ್ರಾಯ ಪಡುತ್ತಾರೆ.

ಇನ್ನು ಟಿಸಿಎಸ್ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈ ಮಾಸಿಕದಲ್ಲಿ PAT (ಪ್ರಾಫಿಟ್ ಆಫ್ಟರ್ ಟ್ಯಾಕ್ಸ್) 7,475 ಕೋಟಿ ರುಪಾಯಿ ಇದೆ. ಇದು 2020ರ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದ ಲೆಕ್ಕಾಚಾರ. ಕಳೆದ ವರ್ಷದ ಇದೇ ಅವಧಿಯಲ್ಲಿ 7,049 ಕೋಟಿ ರುಪಾಯಿ ಇತ್ತು.


Click it and Unblock the Notifications