ಕೊರೊನಾ ಲಾಕ್‌ಡೌನ್‌ನಿಂದಾಗಿ ನೆಲಕಚ್ಚಿದ್ದ ಭಾರತದ ಆರ್ಥಿಕತೆ ಚೇತರಿಕೆಯ ದಿನಗಳು ಇನ್ನಷ್ಟೇ ಆರಂಭವಾಗಬೇಕಿದೆ. ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಭಾಗಶಃ ಕಾರ್ಯಾರಂಭಗೊಂಡಿದೆ. ಕೊರೊನಾವೈರಸ್ ಕಾಲಿಡದ ಗ್ರೀನ್ ಝೋನ್‌ಗಳಲ್ಲಿ ಈಗಾಗಲೇ ಅಂಗಡಿ-ಮುಂಗಟ್ಟುಗಳು ತೆರೆದಿವೆ.
ಅನೇಕ ಆರ್ಥಿಕ ವಿಶ್ಲೇಷಕರು, ಆರ್ಥಿಕ ಮೌಲ್ಯಮಾಪನ ಸಂಸ್ಥೆಗಳು ಭಾರತದ ಜಿಡಿಪಿ ಒಂದಕ್ಕಿಂತ ಕಡಿಮೆ ದಾಖಲಾಗಲಿದೆ ಎಂದೆಲ್ಲಾ ವರದಿ ಮಾಡಿದವು. ಇನ್ನೂ ಕೆಲವು ಶೂನ್ಯ ಎಂದು ಪ್ರಕಟಿಸಿದ್ದವು. ಹೀಗಿರುವಾಗ ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ರಾಜ್ಯಗಳ ಕೊಡುಗೆ ಎಷ್ಟು ಎಂಬುದು ಸಹ ಕುತೂಹಲ ಮೂಡಿಸುತ್ತದೆ.
ದೇಶದ ಒಟ್ಟಾರೆ ಜಿಡಿಪಿಯಲ್ಲಿ ಈ 10 ರಾಜ್ಯಗಳ ಕೊಡುಗೆ 78 ಪರ್ಸೆಂಟ್
ದೇಶದ ಒಟ್ಟಾರೆ ಜಿಡಿಪಿಯಲ್ಲಿ ಮೂರನೇ ನಾಲ್ಕರಷ್ಟು ಕೊಡುಗೆ ಈ 10 ರಾಜ್ಯಗಳಿಂದಲೇ ಅನ್ನೋದು ನಿಜಕ್ಕೂ ವಿಶೇಷವೆನಿಸುತ್ತದೆ. ಈ 10 ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಕೂಡ ಒಂದಾಗಿದೆ. ದೇಶದ ಒಟ್ಟು ಜಿಡಿಪಿ ಮೊತ್ತವಾದ 211 ಲಕ್ಷ ಕೋಟಿಯಲ್ಲಿ ಈ ರಾಜ್ಯಗಳಿಂದಲೇ 78 ಪರ್ಸೆಂಟ್‌ನಷ್ಟು ಆದಾಯ ಬರಲಿದೆ.
ಈ 10 ರಾಜ್ಯಗಳ ಕೊಡುಗೆ ಎಷ್ಟು ಕೋಟಿ?
ಒಟ್ಟಾರೆ ಜಿಡಿಪಿ ಮೊತ್ತವಾದ 211 ಲಕ್ಷ ಕೋಟಿಯಲ್ಲಿ ಸುಮಾರು 163 ಲಕ್ಷ ಕೋಟಿ ರುಪಾಯಿ 10 ರಾಜ್ಯಗಳಿಂದಲೇ ಬರುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ದೇಶದ ಜಿಡಿಪಿ ಕೊಡುಗೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆ.
ಇನ್ನು ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೊಡುಗೆ 48 ಲಕ್ಷ ಕೋಟಿಗಳಷ್ಟಿದೆ.
10 ರಾಜ್ಯಗಳಲ್ಲಿ 72 ಜಿಲ್ಲೆಗಳು ಗ್ರೀನ್ ಝೋನ್
ದೇಶಕ್ಕೆ ಬಹುಪಾಲು ಕೊಡುಗೆ ನೀಡುವ ಈ 10 ರಾಜ್ಯಗಳಲ್ಲಿನ 327 ಜಿಲ್ಲೆಗಳ ಪೈಕಿ ಕೇವಲ 72 ಜಿಲ್ಲೆಗಳು ದಿಗ್ಭಂಧನದ ಗ್ರೀನ್ ಝೋನ್‌ನಲ್ಲಿದೆ. ಆದರೆ ರೆಡ್ ಝೋನ್ ಇರುವ ಜಿಲ್ಲೆಗಳೇ ಕೈಗಾರಿಕಾ ಪ್ರದೇಶಗಳಾಗಿವೆ.
ಗ್ರೀನ್ ಝೋನ್ ಮೇಲೆ ರೆಡ್ ಝೋನ್ ಪ್ರಭಾವ
ಹಸಿರು ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಜಿಡಿಪಿಗೆ 27 ಪರ್ಸೆಂಟ್‌ನಷ್ಟು ಕೊಡುಗೆ ನೀಡುವ ಕೈಗಾರಿಕಾ ವಲಯದಲ್ಲಿ ಸರಕುಗಳ ಪೂರೈಕೆಯೇ ಪ್ರಮುಖ ಅಡಚಣೆಯಾಗಿದೆ. ರೆಡ್ ಝೋನ್‌ಗಳಲ್ಲಿ ಉದ್ದಿಮೆ ವಹಿವಾಟು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳುವವರೆಗೆ ಗ್ರೀನ್ ಝೋನ್‌ಗಳಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಅಡಚಣೆ ಎದುರಾಗಲಿದೆ. ಈ ಕಾರಣಕ್ಕೆ ಮಾರುತಿ ಸೇರಿದಂತೆ ಪ್ರಮುಖ ತಯಾರಿಕಾ ಕಂಪನಿಗಳೇ ಕಾರ್ಯಾರಂಭ ಮಾಡಿಲ್ಲ.


Click it and Unblock the Notifications