ಇದೇ ಮೊದಲ ಬಾರಿಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಾಣಿಸಿಕೊಂಡಿದೆ. ಸದ್ಯಕ್ಕೇನೋ ಪೂರೈಕೆ ಮಾಡುವ ರಾಷ್ಟ್ರಗಳ ಪೈಕಿ 23ನೇ ಸ್ಥಾನದಲ್ಲಿ ಇದೆಯಾದರೂ ಈ ಸ್ಥಾನವನ್ನು ದಾಟಿ, ಮುಂಬರುವ ವರ್ಷಗಳಲ್ಲಿ ಮೇಲಕ್ಕೆ ಏರಲಿದೆ. ಭಾರತ ಸರ್ಕಾರ ಕೂಡ ವಿದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಮಾರುವುದಕ್ಕೆ ಉತ್ತೇಜನ ನೀಡುತ್ತಿದೆ.
ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ವರ್ಗಾವಣೆ ಮಾಡುವ ಬಗ್ಗೆ SIPRIನಿಂದ ದತ್ತಾಂಶ ಬಹಿರಂಗವಾಗಿದೆ. ಅದರ ಪ್ರಕಾರ, 2015ರಿಂದ ಈಚೆಗೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣವು 32% ನಷ್ಟು ಇಳಿಕೆಯಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ಸಿಗುತ್ತಿದ್ದರೂ ಈಗಲೂ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರಗಳ ಖರೀದಿದಾರ ದೇಶವಾಗಿಯೇ ಭಾರತ ಇದೆ.
ಕಳೆದ ಐದು ವರ್ಷದಲ್ಲಿ ಅಮೆರಿಕದಿಂದ ಮಾಡಿಕೊಳ್ಳುವ ಆಮದು ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಭಾರತ ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರಗಳ ಪೈಕಿ ರಷ್ಯಾದ ಪಾಲು ಶೇಕಡಾ 56. ಅಂದ ಹಾಗೆ ರಷ್ಯಾ ನಂತರ ಎರಡನೇ ಸ್ಥಾನದಲ್ಲಿ ಭಾರತಕ್ಕೆ ಅತಿ ಹೆಚ್ಚು ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವುದು ಇಸ್ರೇಲ್. ಅದರ ಪ್ರಮಾಣ 14%. ಮೂರನೇ ಸ್ಥಾನವು ಫ್ರಾನ್ಸ್ ಗೆ. 12% ಶಸ್ತ್ರಾಸ್ತ್ರ ಪೂರೈಸುತ್ತಿದೆ.

ಸದ್ಯಕ್ಕೆ ಶಸ್ತ್ರಾಸ್ತ್ರ ರಫ್ತು ಮಾಡುತ್ತಿರುವ ಪ್ರಮಾಣದಲ್ಲಿ ಭಾರತದ ಪಾಲು 0.2 ಪರ್ಸೆಂಟ್ ಮಾತ್ರ. ಆದರೆ ಭಾರತದ ಅತಿ ದೊಡ್ಡ ಗ್ರಾಹಕ ದೇಶ ಮ್ಯಾನ್ಮಾರ್. ಅಲ್ಲಿಗೆ ಶೇಕಡಾ 46ರಷ್ಟು ಶಸ್ತ್ರಾಸ್ತ್ರ ಆಮದು ಮಾಡಲಾಗುತ್ತಿದೆ. ಆ ನಂತರ ಶ್ರೀಲಂಕಾಗೆ 25% ಮತ್ತು ಮಾರಿಷಿಯಸ್ ಗೆ 14% ನಷ್ಟು ರಫ್ತು ಮಾಡುತ್ತಿದೆ.
ಇದೇ ವೇಳೆ ಭಾರತದ ಎದುರಾಳಿ ಪಾಕಿಸ್ತಾನದ ಬಗೆಗಿನ ಮಾಹಿತಿಯನ್ನು ಸಹ SIPRI ಬಿಡುಗಡೆ ಮಾಡಿದೆ. ತನ್ನ ಶಸ್ತ್ರಾಸ್ತ್ರ ಅಗತ್ಯಗಳಿಗೆ ನೂರರಷ್ಟು ಚೀನಾವನ್ನೇನೂ ಪಾಕಿಸ್ತಾನ ಅವಲಂಬಿಸಿಲ್ಲ. 2015ರಿಂದ ಈಚೆಗೆ ಚೀನಾದಿಂದ ಶೇಕಡಾ 73ರಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಂಡಿದೆ.


Click it and Unblock the Notifications