ಹಲವು ಫಾರ್ಮಸಿಗಳು ಕೊರೊನಾ ಆತಂಕವನ್ನೇ ಲಾಭವನ್ನಾಗಿ ಮಾಡಿಕೊಳ್ಳುತ್ತಿರುವ ಆರೋಪ ಬರುತ್ತಿರುವ ಹೊತ್ತಿನಲ್ಲೇ ಕೇರಳದ ಕೊಚ್ಚಿಯಲ್ಲಿ ಮೆಡಿಕಲ್ ಶಾಪ್ ಮಾಲೀಕರು 2 ರುಪಾಯಿಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಸದ್ಯಕ್ಕೆ ಕೊರೊನಾವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ್ದು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗೆ ವಿಪರೀತ ಬೇಡಿಕೆ ಇದೆ.
ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ಪೂರೈಕೆ ಸೀಮಿತವಾಗಿದ್ದು, ಹೆಚ್ಚುತ್ತಿರುವ ಬೇಡಿಕೆ ಕಾರಣಕ್ಕೆ ಮಾಮೂಲಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಕೇರಳದ ಕೊಚ್ಚಿಯಲ್ಲಿ ಇರುವ ಈ ಮಳಿಗೆಯಲ್ಲಿ ಕಳೆದ ಎರಡು ದಿನದಲ್ಲಿ ಮೂಲ ಬೆಲೆಗೇ 5 ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಮಾರಾಟ ಮಾಡಲಾಗಿದೆ.
ಈ ಬಗ್ಗೆ ಮಳಿಗೆಯ ಮಾಲೀಕರಲ್ಲಿ ಒಬ್ಬರಾದ ನದೀಂ ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿ, ಕಳೆದ ಎರಡು ದಿನಕ್ಕೆ 5000 ಮಾಸ್ಕ್ ಗಳನ್ನು 2 ರುಪಾಯಿಯಂತೆ ಮಾರಾಟ ಮಾಡಿದ್ದೇವೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಾಮಾಣ್ಯ ಜನರಿಗೆ ಕೈಗೆಟುಕುವ ಬೆಲೆಗೆ ಮಾರಾಟ ಮಾಡಬೇಕು ಎಂದು ನಿರ್ಧರಿಸಿಯೇ ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಮತ್ತೊಬ್ಬ ಮಾಲೀಕ ತಶ್ಲೀಮ್ ಮಾತನಾಡಿ, ಕಳೆದ ಎಂಟು ವರ್ಷದಿಂದಲೂ ಎರಡು ರುಪಾಯಿಗೇ ಮಾಸ್ಕ್ ಮಾರುತ್ತಿದ್ದೇವೆ. ಆದರೆ ಈಗ ಎಲ್ಲ ಕಡೆ ಬೆಲೆ ಏರಿಕೆ ಆಗಿದೆ. ನಾವು 8 ಅಥವಾ 10 ರುಪಾಯಿಗೆ ಮಾಸ್ಕ್ ಖರೀದಿಸಿ, 2 ರುಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಬೇರೆಯವರು 25 ರುಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಮುಂದಿನ ನೂರು ದಿನಗಳ ಕಾಲ ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ಅನ್ನು ಅಗತ್ಯ ವಸ್ತುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಜತೆಗೆ ಬೆಲೆ ಮಿತಿ ಹೇರಲು ಸೂಚನೆ ನೀಡಲಾಗಿದೆ.


Click it and Unblock the Notifications